ಭಾರತೀಯ ಶಾಸ್ತ್ರೀಯ ಸಂಗೀತ ಮಾನಸಿಕ ಶಾಂತಿ ಮತ್ತು ಸಂಸ್ಕಾರವನ್ನು ನೀಡುವ ಅದ್ಭುತ ಶಕ್ತಿ ಹೊಂದಿದೆ. ಹಿಂದೂಸ್ತಾನಿ ಸಂಗೀತದ ಸತ್ವ ಎಂದೂ ಮಾಸದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ಮುರಲೀಧರ ಮಳಗಿ ಹೇಳಿದರು

ಹುಬ್ಬಳ್ಳಿ: ಭಾರತೀಯ ಶಾಸ್ತ್ರೀಯ ಸಂಗೀತ ಮಾನಸಿಕ ಶಾಂತಿ ಮತ್ತು ಸಂಸ್ಕಾರವನ್ನು ನೀಡುವ ಅದ್ಭುತ ಶಕ್ತಿ ಹೊಂದಿದೆ. ಹಿಂದೂಸ್ತಾನಿ ಸಂಗೀತದ ಸತ್ವ ಎಂದೂ ಮಾಸದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಪ್ತ ಕಾರ್ಯದರ್ಶಿ ಮುರಲೀಧರ ಮಳಗಿ ಹೇಳಿದರು.

ನಗರದ ಸಂಸ್ಕಾರ ಭಾರತಿ, ಸುನಿಧಿ ಕಲಾ ಸೌರಭ ಹಾಗೂ ಸಿಂಫೋನಿ ಇನ್ಸಿಟಿಟ್ಯೂಟ್ ಆಫ್ ಮ್ಯೂಸಿಕ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಸ್ವರ ಸಂಭ್ರಮ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.ಹು-ಧಾ ಅವಳಿ ನಗರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕಕ್ಕೆ ಜಾಗತಿಕ ಮಟ್ಟದ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಪುಣ್ಯಭೂಮಿ. ಇಂತಹ ಮಣ್ಣಿನಲ್ಲಿ ಇಂದಿನ ಯುವ ಪೀಳಿಗೆಯು ಶಾಸ್ತ್ರೀಯ ಸಂಗೀತದ ಕಡೆಗೆ ಆಕರ್ಷಿತರಾಗುತ್ತಿರುವುದು ಮತ್ತು ಮೂರು ಪ್ರಮುಖ ಸಂಸ್ಥೆಗಳು ಒಟ್ಟಾಗಿ ಈ ಸ್ವರ ಸಂಭ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಸಂಗೀತ ಸಭೆಯಲ್ಲಿ ಕಲಾವಿದರ ಸ್ವರ ಲಹರಿಯು ನೆರೆದಿದ್ದ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ಮನಮೋಹಕ ಕೊಳಲು ಜುಗಲ್‌ಬಂದಿ:

ಅಸಾವರಿ ಜೋಶಿ ಹಾಗೂ ಪರಿಣಿತಾ ಕಟ್ಟಿ ಅವರು ನಡೆಸಿಕೊಟ್ಟ ಕೊಳಲು ಜುಗಲ್‌ಬಂದಿ ಜಂಟಿ ವಾದನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇಬ್ಬರೂ ತಮ್ಮ ವೇಣುವಾದನದ ಮೂಲಕ ಸಭಾಂಗಣದಲ್ಲಿ ದೈವಿಕ ವಾತಾವರಣವನ್ನು ಸೃಷ್ಟಿಸಿದರು. ರಾಗದ ಆಲಾಪನೆ, ತಾನ್ ಹಾಗೂ ಗತ್‌ಗಳ ಜುಗಲ್‌ಬಂದಿಯಲ್ಲಿ ಅವರಿಬ್ಬರ ನಡುವಿನ ಶ್ರುತಿ ಮತ್ತು ಲಯದ ಸಮನ್ವಯತೆ ಅದ್ಭುತವಾಗಿ ಮೂಡಿಬಂದು, ಪ್ರೇಕ್ಷಕರಿಂದ ಭರಪೂರ ಚಪ್ಪಾಳೆ ಗಿಟ್ಟಿಸಿತು.

ನಂತರ ಯುವ ಕಲಾವಿದ ಬಸವರಾಜ ವಂದಲಿ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಜರುಗಿತು. ವಿಳಂಬಿತ್ ಹಾಗೂ ದ್ರುತ್ ಖಯಾಲ್ ಪ್ರಸ್ತುತಿಗಳ ಮೂಲಕ ಸಂಗೀತ ಪ್ರಿಯರಿಗೆ ಶುದ್ಧ ಶಾಸ್ತ್ರೀಯ ಸಂಗೀತದ ರಸದೌತಣ ನೀಡಿದರು. ಇವರಿಗೆ ಪ್ರಸಾದ ಮಡಿವಾಳರ ತಬಲಾ ಸಾಥ್‌ ನೀಡಿದರೆ, ವಿನೋದ ಪಾಟೀಲ ಹಾರ್ಮೋನಿಯಂ ಸಾಥ್‌ ನೀಡಿದರು.

ಹಿರಿಯ ವೈದ್ಯ ಡಾ. ರಾಮಚಂದ್ರ ಕೌಲಗಿ ಕಾರ್ಯಕ್ರಮ ಉದ್ಘಾಟಿಸಿದರು. ವಾಸುದೇವ ಪಾಟೀಲ, ವಿನಯ ನಾಯಕ, ಸುಭಾಸ ನರೇಂದ್ರ ಸೇರಿದಂತೆ ಸಂಸ್ಕಾರ ಭಾರತಿ, ಸುನಿಧಿ ಕಲಾ ಸೌರಭ ಹಾಗೂ ಸಿಂಫೋನಿ ಇನ್ಸಿಟಿಟ್ಯೂಟ್ ಆಫ್ ಮ್ಯೂಸಿಕ್ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.