ಆಧ್ಯಾತ್ಮದಲ್ಲಿ ಬದುಕಿನ ಅಂತಃಸತ್ವ ಅಡಗಿದೆ: ಒಡಿಯೂರು ಶ್ರೀ

| Published : Feb 06 2025, 11:48 PM IST

ಸಾರಾಂಶ

ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆಯ ಸಂದರ್ಭ ಶ್ರೀ ಗುರುದೇವ ಆಧ್ಯಾತ್ಮ‌ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಆಧ್ಯಾತ್ಮದಲ್ಲಿ ಬದುಕಿನ ಅಂತಃಸತ್ವ ಅಡಗಿದೆ. ತನ್ನನ್ನು ತಾನು ಅರಿತುಕೊಳ್ಳುವುದೇ ಆಧ್ಯಾತ್ಮಿಕತೆ. ಅಹಂಕಾರ ಮತ್ತು ಮಮಕಾರ ನಮ್ಮೆಲ್ಲ ಸಮಸ್ಯೆಗಳಿಗೆ ಕಾರಣ. ಅವುಗಳನ್ನು ತೊಡೆದು ಆಧ್ಯಾತ್ಮದತ್ತ ಒಲವು ತೋರಿದಾಗ ನೆಮ್ಮದಿಯ ಬದುಕು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಆರಂಭಗೊಂಡ ಎರಡು ದಿನಗಳ ಒಡಿಯೂರು ರಥೋತ್ಸವ, ತುಳುನಾಡ ಜಾತ್ರೆಯ ಸಂದರ್ಭ ಶ್ರೀ ಗುರುದೇವ ಆಧ್ಯಾತ್ಮ‌ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.ಇಳಿ ವಯಸ್ಸಿನಲ್ಲಿ ಆಧ್ಯಾತ್ಮದತ್ತ ವಾಲುವುದು ಸಹಜ. ಆದರೆ ಆಧ್ಯಾತ್ಮಕ್ಕೆ ವಯಸ್ಸಿನ ಮಾನದಂಡ ಇಲ್ಲ. ಇಂದು ಬದುಕಿನ ಎಲ್ಲ ಸಮಸ್ಯೆಗಳನ್ನು ಆಧ್ಯಾತ್ಮ ಪರಿಹರಿಸಬಹುದು. ಆಧ್ಯಾತ್ಮಕ್ಕೆ ಗಟ್ಟಿ ನೆಲೆ ಒದಗಿಸುವ ದೃಷ್ಟಿಯಿಂದ ಒಡಿಯೂರು ಸಂಸ್ಥಾನದಲ್ಲಿ ಆಧ್ಯಾತ್ಮ ಕೇಂದ್ರ ನಿರ್ಮಾಣ ಮಾಡಲಾಗಿದೆ ಎಂದರು.ಶ್ರೀ ಸಾಧ್ವಿ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು.ವಿವಿಧ ಕ್ಷೇತ್ರಗಳ ಪ್ರಮುಖರಾದ ದಯಾನಂದ ಹೆಗ್ಡೆ, ಡಾ.ಅಧೀಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ವಾಮಯ್ಯ ಬಿ. ಶೆಟ್ಟಿ, ದಾಮೋದರ ಶೆಟ್ಟಿ, ಕಣಂಜಾರು ವಿಕ್ರಮ ಹೆಗ್ಡೆ, ಸಂಪತ್ ಕುಮಾರ್ ಶೆಟ್ಟಿ, ಸಂತೋಷ್ ಹೆಗ್ಡೆ, ಭರತ್ ಭೂಷಣ್, ಜಿತೇಂದ್ರ ಕೊಟ್ಟಾರಿ, ಸಹಕಾರ ರತ್ನ ಸುರೇಶ ರೈ ಎ., ಸರ್ವಾಣಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಾಧ್ವಿ ಶ್ರೀ ಮಾತಾನಂದಮಯಿ ಆಶಯಗೀತೆ ಹಾಡಿದರು.ರಥೋತ್ಸವ ಸಮಿತಿ ಉಪಾಧ್ಯಕ್ಷ ಲೋಕನಾಥ ಜೆ. ಶೆಟ್ಟಿ ಒಡಿಯೂರು ಸ್ವಾಮೀಜಿ ಹಾಗೂ ಸರಿತಾ ಲೋಕನಾಥ ಶೆಟ್ಟಿ, ಶ್ರೀ ಸಾಧ್ವಿ ಮಾತಾನಂದಮಯಿ ಅವರನ್ನು ಗೌರವಿಸಿದರು.ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು. ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.ತುಳು ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.