ತರಳಬಾಳು ಮಠದಲ್ಲಿ ತೆಲಗುಬಾಳು ಸಿದ್ದೇಶ್ವರ ಹಾಗೂ ಮಾದಾರ ಚೆನ್ನಯ್ಯ ಜಯಂತಿ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಚನ ಸಾಹಿತ್ಯಕ್ಕೆ ಮಹತ್ತರವಾದ ಸ್ಥಾನವಿದೆ. ಕನ್ನಡ ಸಾಹಿತ್ಯ ರಾಜಾಶ್ರಯ ಪಡೆದಿತ್ತು. ವಚನ ಸಾಹಿತ್ಯ ಲೋಕಾಶ್ರಯ ಪಡೆದಿತ್ತು. ಪಂಡಿತರಿಂದ ಪಾಮರರಿಗೆ ಅರ್ಥವಾಗುವ, ಸರಳ ಭಾಷೆಯಲ್ಲಿ ನೇರ ನುಡಿಗಳನ್ನೊಳಗೊಂಡ ಶಿವಶರಣ ಅನುಭಾವಮೃತವೇ ವಚನ ಸಾಹಿತ್ಯ ಎಂದು ರಾಣೇಬೆನ್ನೂರು ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್. ಓಂಕಾರನಾಯ್ಕ ಅಭಿಪ್ರಾಯಪಟ್ಟರು.ತರಳಬಾಳು ಜಗದ್ಗುರು ಬೃಹನ್ಮಠದ ಮಹಾದ್ವಾರದ ವೇದಿಕೆಯಲ್ಲಿ ಅಣ್ಣನ ಬಳಗದವರು ಏರ್ಪಡಿಸಿದ್ದ ತರಳಬಾಳು ಸಿದ್ಧೇಶ್ವರ ಹಾಗೂ ಮಾದಾರ ಚನ್ನಯ್ಯ ಜಯಂತಿ ಆಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
12ನೇ ಶತಮಾನದ ಶಿವಶರಣರು ಕಾಯಕ ಹಾಗೂ ವೃತ್ತಿಗಳೆರಡಲ್ಲೂ ಸಮನ್ವಯ ಸಾಧಿಸಲು ನಿರಂತರವಾಗಿ ಹೋರಾಟ ನಡೆಸಿದರು.ತಮ್ಮ ಜೀವನೋಪಾಯಕ್ಕಾಗಿ ಯಾವುದಾದರೊಂದು ವೃತ್ತಿಯನ್ನು ಕೈಗೊಳ್ಳುತ್ತಿದ್ದರು. ಕೇವಲ ತಮ್ಮ ಉಪಯೋಗಕ್ಕಾಗಿ ಕೈಗೊಂಡ ಕೆಲಸ ವೃತ್ತಿಯೆನಿಸಿದರೆ, ಶ್ರದ್ಧೆಯಿಂದ ಪ್ರಾಮಾಣಿಕೆಯಿಂದ ದೈವಾರ್ಪಿತವಾಗಿ ಮಾಡಿದ ಕೆಲಸ ಕಾಯಕವೆನಿಸುತ್ತದೆ.ನಾವು ಮಾಡುವ ಕೆಲಸವನ್ನು ದೈವೀಕರಿಸಿದಾಗ ಸಹ ಅದು ಕಾಯಕವೇ ಆಗುತ್ತದೆ.ತಾವು ಕೈಗೊಂಡ ವೃತ್ತಿಯಾವುದೇ ಇರಲಿ ಅದು ಸತ್ಯ ಶುದ್ಧವಾಗಿದ್ದಲ್ಲಿ ಕಾಯಕ ಎನಿಸಿಕೊಳ್ಳುತ್ತದೆ.ಬಸವಣ್ಣನವರು ಚಕ್ರವರ್ತಿ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾಗಿ ಮಾಡಿದ ಕಾಯಕ, ಮಾದಾರ ಚನ್ನಯ್ಯನವರ ಕುದುರೆಗೆ ಹುಲ್ಲನ್ನು ತರುವ ಕಾಯಕ ಒಂದೇ.ಇಲ್ಲಿ ಕುಲ-ಗೋತ್ರಗಳ ಭೇದ ಭಾವವಿಲ್ಲ, ತರತಮ ಭೇದವಿಲ್ಲ ಎಂದರು.
ಜಾತಿಯಿಂದ ಚನ್ನಯ್ಯ ಮಾದರವನು, ಕಾಯಕದಿಂದ ಅರಸರ ಕುದರೆಗಳಿಗೆ ಹುಲ್ಲು ತರುವ ಕಬಾಡಿಯು ಆಗಿದ್ದ. “ಗುಪ್ತ ಶಿವಭಕ್ತ” ಮಾದಾರ ಚನ್ನಯ್ಯ ಚರ್ಮಗಾರಿಕೆ ಮಾಡುವ ಅಸ್ಪೃಶ್ಯ. ಸದಾ ಕೈಯುಳಿ ಗತ್ತಿ ಮತ್ತು ಅಡಿ ಗೂಟಗಳನ್ನು ಆಶ್ರಯಿಸದೇ ಪರಮಾತ್ಮನ ಬಗ್ಗೆಯೂ ಚಿಂತನೆ ಮಾಡಬೇಕೆಂಬ ಇಂಗಿತವನ್ನು ಅಭಿವ್ಯಕ್ತಗೊಳಿಸಿದ್ದಾನೆ. ಹಿರಿಯ ಶರಣರಲ್ಲಿ ಓರ್ವನಾದ ಮಾದಾರ ಚನ್ನಯ್ಯನು ಬಸವೇಶ್ವರರ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿದವನಾಗಿದ್ದಾನೆ.ಆದ್ದರಿಂದಲೇ ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಮನತುಂಬಿ ಈತನನ್ನು ‘ನಡೆಚೆನ್ನ, ನುಡಿಚೆನ್ನ’ ಎಂದು ಹಾಡಿ ಹೊಗಳಿದ್ದಾರೆ.ಜಾತಿಯಿಂದ ಕೀಳಾದರೂ ನಡೆ-ನುಡಿಯಿಂದ ತುಂಬಾ ಮೇಲುಸ್ತರಕ್ಕೆ ಸೇರಿದಾತ ಚನ್ನಯ್ಯ. ತರಳಬಾಳು ಸಿದ್ಧೇಶ್ವರರನ್ನು ಕುರಿತು ಉಪನ್ಯಾಸ ನೀಡಿದ ಶ್ರೀ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ದೇವರಾಜ ಪಾಟೀಲ ವಿಶ್ವಬಂಧು ಮರುಳಸಿದ್ದರು ಉತ್ತಮ ಶಿಷ್ಯನನ್ನು ಆಯ್ಕೆ ಮಾಡಿಕೊಂಡುದದರ ಫಲವಾಗಿ ಇಂದು ತರಳಬಾಳು ಗುರುಪರಂಪರೆಗೆ ಅತ್ಯಂತ ಉನ್ನತ ಸ್ಥಾನಮಾನ ಸಿಕ್ಕಿದೆ. ವಿಶ್ವಬಂಧು ಮರುಳಸಿದ್ಧರ ಪವಾಡ ಕ್ಷೇತ್ರಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.ತರಳಬಾಳು ಸಿದ್ಧೇಶ್ವರರನ್ನು ನನೆಯುವುದು ಪುಣ್ಯಕರ ಎಂದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯಮಾತನಾಡಿದರು. ಮಾದಾರ ಚನ್ನಯ್ಯ ಹಾಗೂ ತರಳಬಾಳು ಸಿದ್ದೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನೀಲಾಂಬಕಾ ಬಾಲಿಕಾ ಪ್ರೌಢಶಾಲೆಯ ಜೆ.ಧನುಶ್ರೀ ಮತ್ತು ಬಿ. ಬಿಂದುಶ್ರೀ ವಚನ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಚ್.ಎ.ವಿಶ್ವಕುಮಾರ್, ಪ್ರಕಾಶ ಬಡಿಗೇರ, ಯು.ಚಂದ್ರಪ್ಪ, ವಿ. ವಿಜಯಾಚಾರಿ,ಬಿ.ಎಸ್. ಅರುಣಕುಮಾರ ಆಶಾ, ನಿರ್ಮಲ, ಗಿರೀಶ್, ಜಿತೇಂದ್ರ, ನರೇಶ್ ಮುಂತಾದವರು ಇದ್ದರು. ವಸತಿ ನಿಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.