ನವಲಗುಂದ:
ಭಾರತದ ಪುಣ್ಯಭೂಮಿಯಲ್ಲಿ ಹಲವಾರು ಧರ್ಮ ಮತ್ತು ಆಚರಣೆ ಬೆಳೆದುಕೊಂಡು ಬಂದಿವೆ. ಅವುಗಳು ಜನ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರಿವೆ. ಅದರ ಮೌಲ್ಯಗಳ ಅಳಿವು, ಉಳಿವು ಮಾನವನ ಆಚರಣೆಯಲ್ಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.ಮಂಗಳವಾರ ಸ್ಥಳೀಯ ಪಂಚಗೃಹ ಹಿರೇಮಠದ ಶ್ರೀಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮೌಲ್ಯಗಳ ಸಂರಕ್ಷಣೆಯೇ ಧರ್ಮ ಪೀಠಗಳ ಮೂಲ ಗುರಿಯಾಗಿದೆ. ನೀತಿವಂತರು ನಿರಾಶರಾಗಬಾರದು. ನೋವು ನುಂಗಿ ನಲಿವನ್ನು ತೋರಬೇಕಾಗಿದೆ. ಸತ್ಯ ಶುದ್ಧವಾದ ಧರ್ಮ ಮಾರ್ಗದಲ್ಲಿ ಮನುಷ್ಯ ನಡೆದು ಸುಖ-ಶಾಂತಿ ಪಡೆಯಬೇಕಾಗಿದೆ. ಇತಿಹಾಸ-ಪರಂಪರೆವುಳ್ಳ ನವಲಗುಂದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಆದರ್ಶ, ಪರಂಪರೆ ಗುರುವಿನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಬುಧವಾರ ಶುಭ ಮುಹೂರ್ತದಲ್ಲಿ ನೂತನ ಶ್ರೀಗಳಿಗೆ ಗುರುತ್ವಾಧಿಕಾರ ಅನುಗ್ರಹಿಸಿ ಶುಭ ಹಾರೈಸಲಿದ್ದಾರೆ ಎಂದರು.ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ಅರಿವಿನ ಆದರ್ಶ ಜೀವನ ಪ್ರಾಪ್ತಿಗಾಗಿ ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ವಿಶ್ವಾಸವನ್ನಿಟ್ಟು ಬಾಳುವ ಅವಶ್ಯಕತೆಯಿದೆ ಎಂದರು.
ಶ್ರೀಶೈಲ ಪೀಠದ ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಹುಟ್ಟು, ಸಾವು ಯಾರನ್ನೂ ಬಿಟ್ಟಿಲ್ಲ. ಇವುಗಳ ಮಧ್ಯದ ಬದುಕು ಶ್ರೀಮಂತಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿ. ಮನುಷ್ಯ ದೊಡ್ಡ ಮಾತುಗಳನ್ನಾಡುತ್ತಾನೆ. ಆದರೆ, ದೊಡ್ಡವನಾಗಿ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಶ್ರದ್ಧೆ, ನಿಷ್ಠೆ ಮತ್ತು ಅನುಭಾವದಿಂದ ಬದುಕು ನಿರಾಳ. ಸಾಮರಸ್ಯದ ನುಡಿ, ನಡೆ ಚೆಂದ. ಸಮರಸವೇ ಸರ್ವ ಸೌಭಾಗ್ಯಕ್ಕೆ ಸೋಪಾನ. ಜಗದೊಡೆಯನ ಧ್ಯಾನ ಮಾಡಿ ಬದುಕಿನಲ್ಲಿ ಶಾಂತಿ ಕಾಣಬೇಕಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಕಾಶೀ ನೂತನ ಡಾ. ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರು ಆಶೀರ್ವಚನ ನೀಡಿದರು. ಧರ್ಮ ಸಮಾರಂಭ ಉದ್ಘಾಟಿಸಿದ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದರು. ನೇತೃತ್ವ ವಹಿಸಿದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿದರು.ಸಮಾರಂಭಕ್ಕೂ ಮುನ್ನ ಪಟ್ಟಣದ ರಾಜ ಬೀದಿಯಲ್ಲಿ ಭೋವಿ ಜನಾಂಗದವರು ಹಾಗೂ ತಾಲೂಕಿನ ಭಕ್ತರಿಂದ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. 1500 ಹೆಚ್ಚು ಮಹಿಳೆಯರು ಕುಂಭ ಹೊತ್ತು ಮೆರವಣೆಗೆಯಲ್ಲಿ ಪಾಲ್ಗೊಂಡರು.
ಮಾಜಿ ಸಚಿವ ಕೆ.ಎನ್. ಗಡ್ಡಿ, ವಿನೋದ ಅಸೂಟಿ, ದೇವರಾಜ ದಾಡಿಬಾವಿ, ಅಣ್ಣಪ್ಪ ಬಾಗಿ, ಸಿದ್ದಲಿಂಗಯ್ಯ ಹಿರೇಮಠ, ಅಂದಾನಯ್ಯ ಹಿರೇಮಠ, ರಮೇಶ ಕೋನರಡ್ಡಿ, ಚಂಬಣ್ಣ ಹಾಳದೊಟರ್, ಎ.ಸಿ. ವಾಲಿ ಗುರೂಜಿ ಸೇರಿದಂತೆ ಹಲವರಿದ್ದರು.