ಸಾರಾಂಶ
ಕಾರ್ಮಿಕರು ತಮ್ಮ ಹೆಸರನ್ನು ಸಂಬಂಧಿಸಿದ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಸರ್ಕಾರದ ಸೌಲಭ್ಯ ಪಡೆಯುವುದು ಕಷ್ಟವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗಕಾರ್ಮಿಕರು ತಮ್ಮ ಹೆಸರನ್ನು ಸಂಬಂಧಿಸಿದ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಸರ್ಕಾರದ ಸೌಲಭ್ಯ ಪಡೆಯುವುದು ಕಷ್ಟವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಕಾರ್ಮಿಕ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಮಿಕ ಕಾಯ್ದೆಗಳ ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆಯ ಯೋಜನೆಗಳು, ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಅರ್ಹ ಕಾರ್ಮಿಕರು ತಪ್ಪದೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ಪ್ರಮುಖವಾಗಿದ್ದು, ಕಾರ್ಮಿಕ ವರ್ಗ ದೇಶದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಕಾರ್ಮಿಕರು ಇಲಾಖೆಯ ಸೌಲಭ್ಯಗಳು, ಯೋಜನೆಗಳು, ಕಾರ್ಮಿಕ ಕಾನೂನುಗಳ ಕುರಿತು ಮಾಹಿತಿ ತಿಳಿದುಕೊಳ್ಳುವುದು ಅಗತ್ಯವೆಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಕಾರ್ಮಿಕ ಇಲಾಖೆಯ ಯೋಜನೆಗಳು, ಸೌಲಭ್ಯಗಳ ಕುರಿತು ಅರಿವು ಹೊಂದುವುದು ಅಗತ್ಯ. ಇದರಿಂದ ಕಾರ್ಮಿಕರು ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಅರ್ಹ ಕಾರ್ಮಿಕರಿಗೆ ಇಲಾಖೆಯ ಸೌಲಭ್ಯ ದೊರೆಯುವಂತೆ ಕಾರ್ಮಿಕ ಸಂಘಟನೆಗಳು ನೋಡಿಕೊಳ್ಳಬೇಕು. ದೇಶ ಕಾಯುವ ಸೈನಿಕರು, ಅನ್ನ ನೀಡುವ ರೈತರಂತೆ ಕಾರ್ಮಿಕರು ಸಹ ದೇಶಕ್ಕೆ ಬಹಳ ಮುಖ್ಯ. ಕಾರ್ಮಿಕರಿಗೆ ಉತ್ತಮ ಸೌಲಭ್ಯ ದೊರೆತರೆ ಕಾರ್ಮಿಕ ಕಲ್ಯಾಣದ ಜತೆಗೆ ದೇಶದ ಕಲ್ಯಾಣವಾಗಲಿದೆ ಎಂದರು.ಬಳ್ಳಾರಿ - ದಾವಣಗೆರೆ ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ್ ನಾಯ್ಕ್ ಮಾತನಾಡಿ, ಕಾರ್ಮಿಕ ವರ್ಗ ದೇಶದ ಬೆನ್ನೆಲುಬು. ಕಾರ್ಮಿಕರ ಕೆಲಸದಿಂದ ದೇಶದ ಆರ್ಥಿಕಾಭಿವೃದ್ಧಿಗೆ ಬಹುದೊಡ್ಡ ಕೊಡುಗೆ ಲಭಿಸುತ್ತಿದೆ ಎಂದು ಹೇಳಿದರು.
ಅರ್ಹ ಕಾರ್ಮಿಕರೆಲ್ಲರೂ ಇಲಾಖೆಯ ಸೌಲಭ್ಯ, ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ದಿಮೆದಾರರಿಗೂ ಕಾರ್ಮಿಕ ಕಾಯ್ದೆಗಳ ಕುರಿತು ಮಾಹಿತಿ ಇರಬೇಕು. ಜತೆಗೆ ಅವರ ಕರ್ತವ್ಯಗಳ ಬಗ್ಗೆ ತಿಳಿದುಕೊಂಡಿರಬೇಕು. ಕಾರ್ಮಿಕ ವರ್ಗ ಹಾಗೂ ಮಾಲೀಕ ವರ್ಗದವರ ನಡುವೆ ಸಮನ್ವಯತೆ ಸಾಧಿಸಲು ಕಾರ್ಮಿಕ ಕಾಯ್ದೆಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಇರಬೇಕು ಎಂದರು.ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹೊಸ ಯೋಜನೆಗಳು, ಕಾಯ್ದೆಗಳನ್ನು ಜಾರಿಗೊಳಿಸಿದೆ. ಇವುಗಳ ಕುರಿತು ಕಾರ್ಮಿಕರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಮಿಕರ ಭವಿಷ್ಯನಿಧಿ ಇಲಾಖೆಯ ಅಧಿಕಾರಿ ಹಾಗೂ ಸಂಪನ್ಮೂಲ ವ್ಯಕ್ತಿ ವೇಣುಗೋಪಾಲ್, ಕಾರ್ಮಿಕ ನಿರೀಕ್ಷಕರಾದ ರಾಜಣ್ಣ, ಅಲ್ಲಾಭಕ್ಷಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ. ಸತೀಶ್ ಕುಮಾರ್ ಸೇರಿದಂತೆ ಸಂಘಟಿತ, ಅಸಂಘಟಿತ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಇದ್ದರು.