ಸಾರಾಂಶ
ಗೋಕಾಕ ಚಳವಳಿಗೆ ನಾಂದಿ ಹಾಡಿದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕನ್ನಡದ ಕುಲುಗುರುಗಳಾಗಿ, ಈ ನಾಡಿನಲ್ಲಿ ನಡೆದಾಡುವ ವಿಶ್ವಕೋಶವಾಗಿ 700ಕ್ಕೂ ಹೆಚ್ಚು ಸಾಧಕರ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ನರಗುಂದ: ಗೋಕಾಕ ಚಳವಳಿಗೆ ನಾಂದಿ ಹಾಡಿದ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕನ್ನಡದ ಕುಲುಗುರುಗಳಾಗಿ, ಈ ನಾಡಿನಲ್ಲಿ ನಡೆದಾಡುವ ವಿಶ್ವಕೋಶವಾಗಿ 700ಕ್ಕೂ ಹೆಚ್ಚು ಸಾಧಕರ ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ ಹಾಗೂ ಶ್ರೀ ಮುರುಘರಾಜೇಂದ್ರ ಪ್ರೀ ಬೋರ್ಡಿಂಗ್ ಟ್ರಸ್ಟಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 10ನೇ ಶರಣ ಸಂಗಮ ಹಾಗೂ ಕೋಮುಸೌಹಾರ್ದತಾ ಜಗದ್ಗುರು ಡಾ. ಸಿದ್ಧಲಿಂಗ ಶ್ರೀಗಳ 76ನೇ ಜಯಂತ್ಯುತ್ಸವದ ನಿಮಿತ್ತ ಶಾಂತಲಿಂಗ ಶ್ರೀಗಳಿಗೆ ಕನ್ನಡ ಕುಲಗುರು ಗೌರವ ಬಿರುದಾಂಕಿತ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಭುವನೇಶ್ವರಿಗಾಗಿಯೇ ರಥವನ್ನು ನಿರ್ಮಿಸಿ ಕರ್ನಾಟಕ ರಾಜ್ಯೋತ್ಸವವನ್ನು ಜಾತ್ರೆಯನ್ನಾಗಿ ಪರಿವರ್ತಿಸಿ ನಾಡಿನಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿರುವ ಕನ್ನಡ ಸ್ವಾಮಿಗಳು. ಅವರ ಸಾಹಿತ್ಯಕ ಸೇವೆ ಸರ್ವರಿಗೂ ಮಾದರಿಯಾಗಿದೆ ಎಂದರು.ಬಸವ ಕೇಂದ್ರ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಕೇವಲ ಅಧ್ಯಾತ್ಮಕ್ಕೆ ಸೀಮಿತವಾಗಿರದೆ ಪ್ರಗತಿಪರ ವಿಚಾರದೊಂದಿಗೆ ಪ್ರಸ್ತಕ ವಿದ್ಯಮಾನಕ್ಕೆ ಪ್ರತಿಕ್ರಿಯಿಸುವ ಪ್ರಗತಿಪರ ಚಿಂತಕರಾಗಿದ್ದಾರೆ. ಭೈರನಹಟ್ಟಿ ಶ್ರೀಮಠ ಅತ್ಯಂತ ಚಿಕ್ಕದಾಗಿದ್ದರೂ ಅದರ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಬಹಳ ಅಮೋಘವಾಗಿದೆ. ಗದುಗಿನ ಜಗದ್ಗುರುಗಳ ಎಲ್ಲ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದಲ್ಲಿ ಸಾಗುತ್ತಿರುವ ಪೂಜ್ಯರ ಕನ್ನಡ ಸೇವೆ ಅನನ್ಯವಾದುದು ಎಂದು ಹೇಳಿದರು. ಕನ್ನಡ ಕುಲಗುರು ಗೌರವ ಬಿರುದಾಂಕಿತ ಪ್ರಶಸ್ತಿಯನ್ನು ಸ್ವೀಕರಿಸಿ ಆನಂತರ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ತೊಂದರೆ ಬಂದಾಗ ಈ ಭಾಗದಲ್ಲಿ ಮೊಟ್ಟಮೊದಲು ಧ್ವನಿ ಎತ್ತುವ ನಮ್ಮ ಭಾಗದ ಜನತೆ, ನಮ್ಮ ದೊರೆಸ್ವಾಮಿ ಮಠ. ಹಾಗಾಗಿ ಬದುಕಿಗಿಂತ ಭಾಷೆ ದೊಡ್ಡದು. ಕನ್ನಡಿಗರಿಗೆ ಮಾತೃ ಭಾಷೆಯೇ ಜೀವಾಳವೆಂದು ಬದುಕುತ್ತಿರುವ ನಾವುಗಳು ಎಂದರು.ಕನ್ನಡಪರ ಸಂಘಟನೆ ಮುಖಂಡ ಚನ್ನಬಸಪ್ಪ ನಂದಿ ಮಾತನಾಡಿ, ನಾಡಿನ ನೆಲ, ಜಲ, ಭಾಷೆಗೆ ಅನ್ಯಾಯವಾದಾಗ ಮೊದಲು ಧ್ವನಿ ಎತ್ತುವ ನಮ್ಮ ಶಾಂತಲಿಂಗ ಶ್ರೀಗಳು, ಅವರ ಸಮಗ್ರ ಸೇವೆಯನ್ನು ಪರಿಗಣಿಸಿ ಅವರಿಗೆ ಸೂಕ್ತ ಗೌರವವನ್ನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಭೈರನಹಟ್ಟಿ ಮಠ ಚಿಕ್ಕದಾದರೂ ಅವರು ಮಾಡುವಂತಹ ಕೈಂಕರ್ಯ ಬಹಳ ವಿಶಾಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿ.ಎಚ್. ಕೋಟಿ, ಶಂಕ್ರಣ್ಣ ವಾಳದ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಅಪ್ಪಣ್ಣ ನಾಯ್ಕರ, ಪ್ರಕಾಶಗೌಡ ತಿರಕನಗೌಡ್ರ, ವಿ.ಎನ್. ಕೊಳ್ಳಿಯವರ, ಮಹಾಂತೇಶ ಹಿರೇಮಠ, ಟ್ರಸ್ಟಿನ ಸರ್ವ ಧರ್ಮರ್ಶಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಇದ್ದರು. ಕಸಾಪ ತಾಲೂಕು ಅಧ್ಯಕ್ಷ ಪ್ರೊ.ಬಿ.ಸಿ. ಹನಮಂತಗೌಡ್ರ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ರಮೇಶ ಐನಾಪೂರ ವಂದಿಸಿದರು.