ನರಸಿಂಹರಾಜಪುರ: ತಾಲೂಕಿನ ಗಡಿ ಭಾಗದ ಕುದುರೆಗುಂಡಿಯ ಕಪಿಲಾ ನದಿ ತಟದಲ್ಲಿರುವ ಪುರಾಣ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

- ಸಾವಿರಾರು ಭಕ್ತರು ಭಾಗಿ । ನಿರಂತರ ಭಜನೆ ಸೇವೆ

ನರಸಿಂಹರಾಜಪುರ: ತಾಲೂಕಿನ ಗಡಿ ಭಾಗದ ಕುದುರೆಗುಂಡಿಯ ಕಪಿಲಾ ನದಿ ತಟದಲ್ಲಿರುವ ಪುರಾಣ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಪಿಲೇಶ್ವರ ಸೇವಾ ಸಮಿತಿ, ಎಳ್ಳಮಾವಾಸ್ಯೆ ಜಾತ್ರಾ ಸಮಿತಿ, ಕುದುರೆಗುಂಡಿ ಅಶ್ವ ಗುಂಡೇಶ್ವರ ಕ್ರೀಡಾ ಯುವಕ ಸಂಘ ಹಾಗೂ ಸಿಂಧೂರ ಯುವತಿ ಮಂಡಳಿ ನೇತೃತ್ವದಲ್ಲಿ ನಡೆದ ಎಳ್ಳಮಾವಾಸ್ಯೆ ಜಾತ್ರೆಗೆ ಭಕ್ತರು ಬೆಳಿಗ್ಗೆಯಿಂದಲೇ ಆಗಮಿಸಿ ಕಪಿಲಾ ನದಿಯಲ್ಲಿ ಧುಮುಕುತ್ತಿರುವ ಜಲ ಧಾರೆಯಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿದರು. ಶ್ರೀ ಕಪಿಲೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕುಂಕುಮಾರ್ಚನೆ, ಅಷ್ಟೋತ್ತರ, ಪಂಚ ಕಜ್ಜಾಯ, ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಯಿತು. ಭಕ್ತರು ಪೂಜೆ ಸಲ್ಲಿಸಿ ಹಣ್ಣು ಕಾಯಿ ಮಾಡಿಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ 14 ಭಜನಾ ತಂಡದವರು ನಿರಂತರವಾಗಿ ಭಜನೆ ಸೇವೆ ನಡೆಸಿದರು. ದಾನಿಗಳಾದ ಗದ್ದೇಮನೆ ವಿಶ್ವನಾಥ್ ಅನ್ನದಾನ ಏರ್ಪಡಿಸಿದ್ದು 3 ಸಾವಿರಕ್ಕೂ ಹೆಚ್ಚು ಜನರು ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕಪಿಲೇಶ್ವರ ಸೇವಾ ಸಮಿತಿ ಹಾಗೂ ಎಳ್ಳಮಾವಾಸ್ಯೆ ಜಾತ್ರಾ ಸಮಿತಿಯಿಂದ ಕೊಪ್ಪ ಪೊಲೀಸ್ ಠಾಣಾಧಿಕಾರಿ ಜಿ.ಕೆ.ಬಸವರಾಜ್ ದಂಪತಿಗಳನ್ನು ಗೌರವಿಸಲಾಯಿತು.

ಕಪಿಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ಶಿವರಾಜ್, ಎಳ್ಳಮಾವಾಸ್ಯೆ ಜಾತ್ರಾ ಸಮಿತಿ ಅಧ್ಯಕ್ಷ ಹೇಮಂತಶೆಟ್ಟಿ, ಕುದುರೆಗುಂಡಿ ಕಾಫಿ ಬೆಳೆಗಾರ ದೀಪಕ್ ಮತ್ತಿತರ ಮುಖಂಡರು ಇದ್ದರು.