ಸಾರಾಂಶ
ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಗೋವಿನಜೋಳವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಲು ಕೇಂದ್ರ ಆರಂಭಿಸಲು ಒಪ್ಪಿದ ಹಿನ್ನೆಲೆ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಉಪವಾಸ ಅಂತ್ಯಗೊಳಿಸಿದರು.
ಹೋರಾಟ ವೇದಿಕೆಯಲ್ಲಿ ಗುರುವಾರ ಅಸ್ವಸ್ಥರಾಗಿದ್ದ ಹಿನ್ನೆಲೆ ಶ್ರೀಗಳನ್ನು ಗದುಗಿನ ಜಿಮ್ಸ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಸರ್ಕಾರದ ನಿರ್ಧಾರದಿಂದ ಹರ್ಷಗೊಂಡ ಶ್ರೀಗಳು ಲಕ್ಷ್ಮೇಶ್ವರದ ಹೋರಾಟ ವೇದಿಕೆಗೆ ಆಗಮಿಸಿ ಮುಖಂಡರೊಂದಿಗೆ ಚರ್ಚಿಸಿ ಉಪವಾಸ ಕೈಬಿಡಲು ನಿರ್ಧರಿಸಿದರು. ಜಿಲ್ಲಾಧಿಕಾರಿ ಶ್ರೀಧರ ಅವರು ಎಳನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.ಹೋರಾಟಗಾರರು ಮಾತನಾಡಿ, ಶ್ರೀಗಳು ಉಪವಾಸ ಸತ್ಯಾಗ್ರಹ ಕೈಬಿಟ್ಟಿರುವುದು ಸಂತೋಷದ ಸಂಗತಿ. ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗುವ ವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.
ಶುಕ್ರವಾರ ರಾಜ್ಯ ಸರ್ಕಾರ ಗೋವಿನಜೋಳ ಬೆಳೆದ ರೈತರಿಗೆ ಖರೀದಿ ಕೇಂದ್ರ ಆರಂಭಿಸಿ ಗೋವಿನಜೋಳ ಖರೀದಿ ಮಾಡುತ್ತೇವೆ ಎಂಬ ಸಿಹಿಸುದ್ದಿ ನೀಡಿದ ಹಿನ್ನೆಲೆ ಪಟ್ಟಣದಲ್ಲಿ ರೈತಪರ ಹೋರಾಟಗಾರರ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ವೇಳೆ ಕುಂದಗೋಳದ ಬಸವಣ್ಣ ಶ್ರೀಗಳು, ಮಾಜಿ ಶಾಸಕ ರಾಮಣ್ಣ ಲಮಾಣಿ, ಉಪವಿಭಾಗಾಧಿಕಾರಿ ಗಂಗಪ್ಪ, ಮಂಜುನಾಥ ಮಾಗಡಿ. ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡರ, ಪೂರ್ಣಾಜಿ ಕರಾಟೆ, ಬಸಣ್ಣ ಬೆಂಡಿಗೇರಿ, ಟಾಕಪ್ಪ ಸಾತಪುತೆ, ರವಿಕಾಂತ ಅಂಗಡಿ, ನೀಲಪ್ಪ ಶೆರಸೂರಿ, ಮಲ್ಲು ಅಂಕಲಿ, ವೀರೇಂದ್ರಗೌಡ ಪಾಟೀಲ, ದಾದಾಪೀರ್ ಮುಚ್ಚಾಲೆ, ಹೊನ್ನಪ್ಪ ವಡ್ಡರ, ಶಿವಾನಂದ ಲಿಂಗಶೆಟ್ಟಿ, ಸುರೇಶ ಹಟ್ಟಿ, ರಾಮಣ್ಣ ಗೌರಿ, ಖಾನಸಾಬ ಸೂರಣಗಿ, ವಿರುಪಾಕ್ಷಪ್ಪ ಮುದಕಣ್ಣವರ, ಮಲ್ಲೇಶಿ ಕಲ್ಲೂರ, ಬಸವರಾಜ ಹೊಗೆಸೊಪ್ಪಿನ, ಬಸವರಾಜ ಕಲ್ಲೂರ ಸೇರಿದಂತೆ ಅನೇಕರು ಇದ್ದರು. ಆಸ್ಪತ್ರೆಗೆ ಮತ್ತೆ ಶ್ರೀಗಳು ದಾಖಲು: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರಳ್ಳಿಯ ಡಾ. ಕುಮಾರ ಮಹಾರಾಜರ ಅರೋಗ್ಯ ಇನ್ನೂ ಪೂರ್ಣವಾಗಿ ಸುಧಾರಣೆ ಕಂಡಿಲ್ಲ. ಈ ಹಿನ್ನೆಲೆ ಹೋರಾಟ ವೇದಿಕೆಯಿಂದ ಚಿಕಿತ್ಸೆಗಾಗಿ ಮತ್ತೆ ಗದಗ ಜಿಲ್ಲಾಸ್ಪತ್ರೆಗೆ ತೆರಳಿದರು.
;Resize=(128,128))
;Resize=(128,128))