ಉಡುಪಿ- ಚಿಕ್ಕಮಗಳೂರು ಕ್ಷೇತ್ರದ 10 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

| Published : Apr 26 2024, 12:53 AM IST

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ 10 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಪೂರ್ಣ ಸಿದ್ಧತೆಗಳು ನಡೆದಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ - ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರಕ್ಕೆ ಇಂದು (ಏಪ್ರಿಲ್‌ 26) ಮುಕ್ತ ಮತ್ತು ನ್ಯಾಯಯುವ ಮತದಾನಕ್ಕೆ ಉಭಯ ಜಿಲ್ಲಾಡಳಿತಗಳು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿವೆ. ಮುಖ್ಯವಾಗಿ ಸೂಕ್ಷ್ಮ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ.

ಕ್ಷೇತ್ರದಲ್ಲಿ ಒಟ್ಟು 15,85,162 ಅರ್ಹ ಮತದಾರರಿದ್ದಾರೆ, ಅವರಲ್ಲಿ 7,68,215 ಪುರುಷ ಮತ್ತು 8,16,910 ಮಹಿಳಾ ಮತದಾರರು ಮತ್ತು 37 ತೃತೀಯ ಲಿಂಗ ಮತದರಾರರಾಗಿದ್ದಾರೆ. ಈ ಕಣದಲ್ಲಿ ಒಟ್ಟು 10 ಮಂದಿ ಅಭ್ಯರ್ಥಿಗಳಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ಸಂಜೆ 6 ಗಂಟೆಗೆ ಈ ಆಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದಾಖಲಾಗಲಿದೆ.

ಈ ಲೋಕಸಭಾ ಕ್ಷೇತ್ರದ 8 ವಿಧಾನ ಕ್ಷೇತ್ರಗಳಲ್ಲಿರುವ ಒಟ್ಟು 1842 ಮತಗಟ್ಟೆಗಳಿದ್ದು, ಈ ಬಾರಿ ಚುನಾವಣಾ ಆಯೋಗದ ವಿಶೇಷ ಸೂಚನೆಯಂತೆ, ಅವುಗಳ ಪೈಕಿ 1270 ಮತಗಟ್ಟೆಗಳಲ್ಲಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ. ಅಂದರೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ಕುಳಿತು ಈ ಮತಗಟ್ಟೆಗಳ ಆಗುಹೋಗುಗಳನ್ನು ವೀಕ್ಷಿಸಲಿದ್ದಾರೆ. ಇಂಟರ್ನೆಟ್ ಲಭ್ಯವಿಲ್ಲದ 18 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್‌ಗಳ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಲಾಗುತ್ತಿದೆ.

ಸಶಸ್ತ್ರ ಮೀಸಲು ಪೊಲೀಸರ ಕಾವಲು: ಉಡುಪಿ ಜಿಲ್ಲೆಯಲ್ಲಿ 203 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 202 ಸೂಕ್ಷ್ಮ ಮತಗಟ್ಟೆಗಳನ್ನು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಟ್ಟು 52 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸರಿಂದ ಹೆಚ್ಚು ಕಾವಲು ಏರ್ಪಡಿಸಲಾಗಿದೆ.

ಒಟ್ಟಾರೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಂದೋಬಸ್ತ್‌ಗಾಗಿ ನಾಲ್ಕು ಸಶಸ್ತ್ರ ಮೀಸಲು ಪೊಲೀಸ್ ಪಡೆಯ 500 ಸಿಬ್ಬಂದಿ, ಮೂರು ಎಸ್ಪಿ ಶ್ರೇಣಿಯ ಅಧಿಕಾರಿಗಳು, ಆರು ಮಂದಿ ಡಿವೈಎಸ್ಪಿಗಳು, 15 ಪೊಲೀಸ್ ನಿರೀಕ್ಷಕರು, 1501 ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಚುನಾವಣೆಗೆ ಒಟ್ಟು 124 ವಿವಿಧ ವಾಹನಗಳನ್ನು ಮತ್ತು ವಿವಿಧ ಸ್ತರದ 4120 ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಶೇ. 97ರಷ್ಟು ಮನೆಮತದಾನ: ಈಗಾಗಲೇ ಚುನಾವಣೆಗೆ ಸಂಬಂಧಿ ಕರ್ತವ್ಯದಲ್ಲಿರುವ ಸೇವಾ ಮತದಾರರ ವರ್ಗಕ್ಕೆ ಸೇರಿದ ಒಟ್ಟು 559 ಮತದಾರರಿಗೆ ಏ..9ರಂದೇ ವಿದ್ಯುನ್ಮಾನ ಅಂಚೆ ಮತಪತ್ರವನ್ನು ರವಾನಿಸಲಾಗಿದೆ. ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 4664 ಮತ್ತು ಅಂಗವಿಕಲ 1436 ಮಂದಿ ಮನೆಯಿಂದ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಒಟ್ಟು ಶೇ. 97 ಮಂದಿ ಮತ ಚಲಾಯಿಸಿದ್ದಾರೆ.

ಆಕರ್ಷಕ ಮತಗಟ್ಟೆಗಳು: ಮತದಾನ ಹಬ್ಬದಂತೆ ನಡೆಯಬೇಕು ಎನ್ನುವ ಉದ್ದೇಶದಿಂದ ಮತದಾರರನ್ನು ಮನಸೆಳೆಯುವುದಕ್ಕಾಗಿ ಆಯ್ದ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಶೃಂಗಾರಗೊಳಿಸಿ ಸಜ್ಜುಗೊಳಿಸಲಾಗಿದೆ. ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 5 ಮಹಿಳಾ ಮತಗಟ್ಟೆಗಳು, ತಲಾ ಒಂದರಂತೆ ಅಂಗವಿಕಲ, ಯುವ, ಸಾಂಪ್ರದಾಯಿಕ ಮತ್ತು ವಿಷಯಾಧಾರಿತ ಮತಗಟ್ಟೆಗಳ ಸೇರಿ ಒಟ್ಟು 36 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.