ಸಾರಾಂಶ
2050ರ ವೇಳೆಗೆ ತುಂಗಭದ್ರಾ ನದಿ ಕೇವಲ ಕುಡಿಯುವ ನೀರಿಗೂ ಸಾಕಾಗದಂತೆ ಆಗಲಿದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ತುಂಗಭದ್ರಾ ನದಿಯನ್ನು ನಾವೆಲ್ಲಾ ಕಾಪಾಡಿಕೊಳ್ಳದೆ ಇದ್ದರೇ ಮುಂದಿನ ದಿನಗಳಲ್ಲಿ ಅದು ನಶಿಸಿ ಹೋಗಲಿದೆ. 2050ರ ವೇಳೆಗೆ ತುಂಗಭದ್ರಾ ನದಿ ಕೇವಲ ಕುಡಿಯುವ ನೀರಿಗೂ ಸಾಕಾಗದಂತೆ ಆಗಲಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಹೇಳಿದ್ದಾರೆ.ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ನದಿಯ ಉಳುವಿಗಾಗಿ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ನದಿಗಳು ನಶಿಸಿ ಹೋಗಿವೆ. ಹೀಗಾಗಿ, ಇರುವ ನದಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಶ್ರಮಿಸುತ್ತಿದೆ. ಉತ್ತರ ಭಾರತದಲ್ಲಿ ಇದರ ಜಾಗೃತಿ ಅಭಿಯಾನ ಜೋರಾಗಿ ನಡೆಯುತ್ತಿದೆ. ನಾನು ಸ್ವಯಂ ಆಸಕ್ತಿಯಿಂದ ಈ ಭಾಗದವನೇ ಆಗಿರುವುದರಿಂದ ತುಂಗಭದ್ರಾ ನದಿ ಉಳಿವಿಗಾಗಿ ಈ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದೇವೆ ಎಂದರು.
ನ. 6 ರಂದು ಶೃಂಗೇರಿಯಿಂದ ಪ್ರಾರಂಭವಾಗಿರುವ ಈ ಅಭಿಯಾನ ಜನಜಾಗೃತಿ ಮತ್ತು ಜಲಜಾಗೃತಿ ಮಾಡುತ್ತಿದೆ. ನಾಲ್ಕು ಹಂತಗಳಲ್ಲಿ ಅಭಿಯಾನ ನಡೆಯಲಿದ್ದು, ಮೊದಲು ಜಾಗೃತಿ ಅಭಿಯಾನ ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ. 27 ರಂದು ಹುಲಿಗಿಗೆ ಆಗಮಿಸಲಿದೆ. ಡಿ. 28ರಂದು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ. ಡಿ. 29ರಂದು ತುಂಗಾರತಿ ನಡೆಯಲಿದೆ. ಡಿ. 30ರಂದು ಗಂಗಾವತಿಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.ತುಂಗಭದ್ರಾ ನದಿ ಉಗಮ ಸ್ಥಳದಲ್ಲಿ ಈಗಾಗಲೇ ಕಾಡು ನಾಶವಾಗಿದೆ. ಇದರಿಂದಲೂ ಸಹ ನದಿಯ ಮೂಲಕ್ಕೂ ಪೆಟ್ಟು ಬಿದ್ದಿದ್ದು, ಇದು ನಶಿಸುವ ನದಿಗಳ ಸಾಲಿನಲ್ಲಿಯೇ ಇದೆ. ಈಗಿನಿಂದಲೇ ಇದನ್ನು ಉಳಿಸಬೇಕಾಗಿದೆ ಎಂದರು.
ಹಾಡು ಬಿಡುಗಡೆ:ನಿರ್ಮಲಾ ತುಂಗಭದ್ರಾ ಅಭಿಯಾನದ ಕುರಿತು ಡಾ. ಶಿವಕುಮಾರ ಅವರ ರಚಿಸಿರುವ ಹಾಡನ್ನು ಸಹ ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.
ರಾಘವೇಂದ್ರ ತೂನಾ, ಡಾ. ಶಿವಕುಮಾರ ಪಾಟೀಲ, ಮಂಜುನಾಥ ಕಟ್ಟಿಮನಿ, ಬಸವರಾಜ ಹುಬ್ಬಳ್ಳಿ ಇದ್ದರು.