ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಸುರಿದ ಮಳೆಗೆ ನಗರದ ನೆಹರೂ ವೃತ್ತದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಹಿಂಭಾಗದ ಇಡೀ ಸಂತೆ ಮೈದಾನ ಮಳೆನೀರು, ಕೆಸರಿನಿಂದ ಆವೃತ್ತವಾಗಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೊಂದರೆಗೆ ಒಳಗಾದರು.ಭಾನುವಾರ ಎಂದಿನಂತೆ ಸಂತೆ ಆಂಭಿಸಿದ ವ್ಯಾಪಾರಸ್ಥರು ಪ್ರಾರಂಭದಲ್ಲಿ ಸಂತೆ ಮೈದಾನದಲ್ಲಿದ್ದ ಗುಂಡಿಗಳಲ್ಲಿ ಮಳೆನೀರು ಮತ್ತು ಕೆಸರಿನಿಂದ ಆವೃತ್ತವಾಗಿತ್ತು, ಗಾಡಿಯಲ್ಲಿ ಹೊತ್ತುತಂದ ತರಕಾರಿ ಚೀಲಗಳನ್ನು ಎಲ್ಲಿ ಇರಿಸಬೇಕೆಂಬುವುದೇ ದೊಡ್ಡತಲೆನೋವಾಗಿತ್ತು. ಗಾಡಿಮಾಲೀಕರು ಕೆಸರಿನ ಅವಾಂತರವನ್ನು ಕಂಡು ಗಾಡಿಗಳನ್ನು ಒಳತರಲು ನಿರಾಕರಿಸಿದರು. ಕೆಲವು ಗಾಡಿಯವರು ಪ್ರಯಾಸದಿಂದ ತರಕಾರಿ ಚೀಲ ಗಾಡಿಯಲ್ಲಿಹಾಕಿಕೊಂಡು ಸಂತೆಮೈದಾನಕ್ಕೆ ಬಿಟ್ಟರು. ವ್ಯಾಪಾರಸ್ಥರು ಮಾತ್ರ ಖರೀದಿಸಲು ಹೆಚ್ಚಿನ ಜನಬಾರದ ಕಾರಣ ತಂದ ತರಕಾರಿ ಹಾಗೂ ಇತರೆ ವಸ್ತುಗಳು ವ್ಯಾಪಾರವಾಗದೆ ಹಾಗೆ ಉಳಿದಿದ್ದು, ಸಂತೆ ಮೈದಾನದ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಂತೆ ಮೈದಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿಜಯಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ವ್ಯಾಪಾರಸ್ಥರ ಅಳಲನ್ನು ಯಾರು ಕೇಳುತ್ತಾರೆ. ಕಳೆದ ಸುಮಾರು ಎರಡು ವರ್ಷಗಳಿಂದ ಸಂತೆಮೈದಾನವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ನಗರಸಭೆ ಆಡಳಿತ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದೇವೆ. ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ಕೆಲವೊಂದು ಮಾರ್ಪಾಡು ಮಾಡಿದರೂ ಸಂತೆ ಮೈದಾನದ ಒಳಗೆ ನುಗ್ಗುವ ಮಳೆ ನೀರನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಕೂಡಲೇ ಸಂತೆಮೈದಾನದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡಿ ಸಂಬಂಧಪಟ್ಟ ಕಾಮಗಾರಿಯನ್ನು ಪೂರೈಸಿದರೆ ಮಾತ್ರ ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕನ್ನು ಕಾಣಬಹುದಾಗಿದೆ ಎಂದರು.ಕಳೆದ 2024ರಲ್ಲಿ ಈ ಭಾಗದ ಕೆಲವು ರಸ್ತೆಗಳಿಗೆ ನಗರಸಭೆ ಆಡಳಿತ ಸ್ಲಾಬ್‌ಗಳನ್ನು ಹಾಕಿ ಭದ್ರಪಡಿಸಿದ್ಧಾರೆ. ಆದರೆ, ಇನ್ನುಳಿದ ಖಾಲಿಜಾಗಕ್ಕೆ ಯಾವುದೇ ಸ್ಲಾಬ್ ಹಾಕದೆ ನಿರ್ಲಕ್ಷ್ಯ ವಹಿಸಿರುವುದು ಇಂದಿನ ದುಸ್ಥಿತಿಗೆ ಕಾರಣವಾಗಿದೆ. ವಿಶೇಷವಾಗಿ ಯಾವುದೇ ಸಂದರ್ಭದಲ್ಲಿ ಹೆಚ್ಚಿನ ಮಳೆಯಾದರೆ ನೀರು ಹೊರಗೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಪ್ರಸ್ತುತ ಸಂತೆಮೈದಾನ ಸುತ್ತಲು ಎತ್ತರವಿದ್ದು ಮಧ್ಯಭಾಗದಲ್ಲಿ ಮಾತ್ರ ಗುಂಡಿಗಳಿAದ ಕೂಡಿದೆ. ಇದು ಮಳೆ ನೀರು ಸಂಗ್ರಹವಾಗಿ ಕೆಸರು ತುಂಬಲು ಕಾರಣವಾಗಿದೆ. ವ್ಯಾಪಾರಸ್ಥರು ಈ ಕೂಡಲೇ ಶಾಸಕರು ಭೇಟಿ ಮಾಡಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.