ಸಾರಾಂಶ
ಖಾಜಾಮೈನುದ್ದೀನ್ ಪಟೇಲ್
ಕನ್ನಡಪ್ರಭ ವಾರ್ತೆ ವಿಜಯಪುರಭೀಕರ ಬರದ ಮಧ್ಯೆಯೂ ಗುಮ್ಮಟ ನಗರಿಯ ಮುಸ್ಲಿಂ ಸಮುದಾಯದವರಲ್ಲಿ ಪವಿತ್ರ ರಂಜಾನ್ ಹಬ್ಬದ ಜೋರಾಗಿದೆ. ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆಯೇ ರಸ್ತೆಗಳಿಗೆ ವಿಶೇಷ ಕಳೆ ಬರುತ್ತಿದೆ. ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರುಕಟ್ಟೆ ಕಳೆಗಟ್ಟುತ್ತಿದೆ.
ರಂಜಾನ್ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸಂಜೆ ಆಗುತ್ತಿದ್ದಂತೆಯೇ ಜನದಟ್ಟಣೆ ಹೆಚ್ಚಾಗುತ್ತದೆ. ತರಹೇವಾರಿ ಹಣ್ಣುಗಳು, ಉಡುಪುಗಳು, ಖರ್ಜೂರ... ಹೀಗೆ ಬಗೆಬಗೆಯ ಖಾದ್ಯಗಳು, ವಸ್ತ್ರಗಳು ಹಾಗೂ ಸಾಮಗ್ರಿಗಳ ವ್ಯಾಪಾರ ಜೋರಾಗಿದೆ. ಹಬ್ಬದ ಸಂಭ್ರಮಕ್ಕಾಗಿ ಮುಸ್ಲಿಮರು ಅಗತ್ಯ ಸಾಮಗ್ರಿ ಖರೀದಿಸುವಲ್ಲಿ ತಲ್ಲೀನರಾಗಿದ್ದಾರೆ. ಸಂಜೆಯಾಗುತ್ತಲೇ ಖರೀದಿಗಾಗಿ ತಂಡೋಪ ತಂಡವಾಗಿ ಮಹಿಳೆಯರು ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದು, ಸಹಜವಾಗಿಯೇ ಜನದಟ್ಟಣೆ ಹೆಚ್ಚುತ್ತಿದೆ.ನಗರದ ಕೆಸಿ ಮಾರುಕಟ್ಟೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬದಿ, ಮಸೀದಿಗಳ ಬಳಿ ತಳ್ಳುಗಾಡಿಗಳಲ್ಲೇ ವಿವಿಧ ಆಹಾರ ತಿಂಡಿಗಳು ಹಾಗೂ ಬಟ್ಟೆಗಳ ವ್ಯಾಪಾರ ಜೋರಾಗಿದೆ. ಹಬ್ಬಕ್ಕೆ ಎಲ್ಲರೂ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಗರದ ಮಾರುಕಟ್ಟೆಗಳಲ್ಲೀಗ ಜನಜಾತ್ರೆಯೇ ಸೇರುತ್ತಿದೆ. ಎಲ್ಲಡೆಯೂ ಸಡಗರದ ವಾತಾವರಣ ಕಂಡುರುತ್ತಿದೆ.
ಹಬ್ಬ ಸಂಭ್ರಮಕ್ಕರ ಬೆಲೆ ಏರಿಕೆ ಬಿಸಿ:ಬಹುತೇಕ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ. ಎಲ್ಲವೂ ದುಬಾರಿ ಆಗಿರುವುದರಿಂದ ಹಬ್ಬಕ್ಕೆ ಬರ ಹಾಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಿಂದೆ ಹಬ್ಬಕ್ಕೆ ಕನಿಷ್ಠ ಏನಿಲ್ಲವೆಂದರೂ ಒಬ್ಬ ವ್ಯಕ್ತಿ 2-3 ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತಿದ್ದರು. ಆದರೆ ಈಗ ಬಹುತೇಕರು ಒಂದೊಂದೇ ಬಟ್ಟೆ ಖರೀದಿಸುತ್ತಿದ್ದಾರೆ. ದುಬಾರಿ ಬಟ್ಟೆ, ವಸ್ತುಗಳ ಖರೀದಿ ಕಡಿಮೆಯಾಗಿದೆ. ಅಗ್ಗದ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಒಂದು ಕೆಜಿ ಸಾಮಗ್ರಿ ಖರೀದಿಸುವವರು ಅರ್ಧ ಕೆಜಿಗೆ ಸೀಮಿತಗೊಳ್ಳುತ್ತಿದ್ದಾರೆ.
ಸುರಕುಂಬಾ ತಯಾರಿಕೆ:ರಂಜಾನ್ ಹಬ್ಬದ ವಿಶೇಷ ಸಿಹಿ ಖಾದ್ಯವಾದ ಸುರಕುಂಬಾ ತಯಾರಿಕೆಗೆ ಅವಶ್ಯಕವಾದ ಗೋಡಂಬಿ, ದ್ರಾಕ್ಷಿ, ಶಾವಿಗೆ, ಉತ್ತತ್ತಿ ಸೇರಿದಂತೆ ವಿವಿಧ ಡ್ರೈ ಫ್ರುಟ್ಸ್‌ಗಳು ಮತ್ತು ಬಿರಿಯಾನಿ, ವಿಶೇಷ ಮಾಂಸಹಾರಕ್ಕಾಗಿ ಬೇಕಾದ ಮಸಾಲೆ ಪದಾರ್ಥಗಳು ಮತ್ತು ಮದರಂಗಿ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಕಾಲಿಟ್ಟರೆ ಸಾಕು, ನಾನಾ ಬಗೆಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳು ಗ್ರಾಹಕರನ್ನು ಸೆಳೆಯುತ್ತವೆ. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಮಟನ್ ಕಬಾಬ್, ಚಿಕನ್ ರೋಲ್, ಚಿಕನ್ ತಂದೂರಿ, ಸಮೋಸಾ, ಹೈದ್ರಾಬಾದ್ ಹಲಿಮಾ..ರೋಲ್ ಹೀಗೆ ಸಂಜೆಯಿಂದ ಮಧ್ಯರಾತ್ರಿಯವರೆಗೆ ತರಹೇವಾರಿ ಖಾದ್ಯಗಳನ್ನು ಜನರು ಸವಿಯುತ್ತಿರುವುದು ಕಂಡುಬರುತ್ತಿದೆ. ಅಲ್ಲಲ್ಲಿ ಸಸ್ಯಾಹಾರಿ ಖಾದ್ಯಗಳಿಗೂ ಬೇಡಿಕೆ ಇದೆ. ಸಿಹಿ ತಿನಿಸುಗಳಾದ ಫಿರನಿ, ಪುಡ್ಡಿಂಗ್, ಐಸ್‌ಕ್ರೀಮ್, ವಿವಿಧ ಹಣ್ಣಿನ ರಸವನ್ನು ಜನರು ಸವಿದು ಖುಷಿಪಡುತ್ತಿದ್ದಾರೆ.ಬಟ್ಟೆಗಳ ಮಾರಾಟವೂ ಜೋರು !
ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಮಾಡುತ್ತಾರೆ. ಈ ಹಬ್ಬಕ್ಕಾಗಿ ದೇಶ ವಿದೇಶಗಳಿಂದ ಬಟ್ಟೆಗಳು ವಿಜಯಪುರಕ್ಕೆ ಬರುತ್ತವೆ. ವೈವಿಧ್ಯಮಯ ಸೀರೆಗಳು, ಬಟ್ಟೆಗಳು ಮಹಿಳೆಯರನ್ನು ಸೆಳೆಯುತ್ತಿವೆ. ಮಕ್ಕಳು. ಯುವಕ-ಯುವತಿಯರ ಸಿದ್ಧ ಉಡುಪುಗಳಿಗೆ ಹೆಚ್ಚಿಗೆ ಮಾರಾಟವಾಗುತ್ತಿವೆ. ಜುಬ್ಬಾ, ಕರ್ತ ಪೈಜಾಮ್ ಖರೀದಿ ಜೋರಾಗಿದೆ.ಝಗಮಗಿಸುತ್ತಿವೆ ಮಸೀದಿ, ರಸ್ತೆಗಳು:ನಗರದಲ್ಲಿ ರಂಜಾನ್ ಪ್ರಯುಕ್ತ ಮಸೀದಿ, ದರ್ಗಾ, ಮಾರುಕಟ್ಟೆಗಳು, ರಸ್ತೆಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ನಗರದ ಜುಮ್ಮಾ ಮಸೀದಿ ರಸ್ತೆ, ಕೆಸಿ ಮಾರುಕಟ್ಟೆ ರಸ್ತೆ, ಎಲ್ಬಿಎಸ್ ಮಾರುಕಟ್ಟೆ ರಸ್ತೆ ಸೇರಿದಂತೆ ಹಲವಾರು ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಕಂಡು ಬರುತ್ತಿದೆ.