ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಹೊಸಹಳ್ಳಿ-ರಾಮನಹಳ್ಳಿ ಬಡಾವಣೆಯಲ್ಲಿ ಶ್ರೀಬಿಸಿಲು ಮಾರಮ್ಮ, ತಂಪು ಮಾರಮ್ಮ ಹಾಗೂ ಶ್ರೀಮಾರಮ್ಮ ದೇವರ ಹಬ್ಬ ಸಂಭ್ರಮದಿಂದ ನಡೆಯಿತು. ಮಹಿಳೆಯರು ಆರತಿಯೊಂದಿಗೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಮೆರುಗು ತಂದರು.

ಶ್ರೀಬಿಸಿಲು ಮಾರಮ್ಮನ ದೇವಸ್ಥಾನದಲ್ಲಿ ಸೇರಿದ ಗ್ರಾಮಸ್ಥರು ಯಜಮಾನರ ಸಮ್ಮುಖದಲ್ಲಿ ಶ್ರೀಬಿಸಿಲು ಮಾರಮ್ಮ ದೇವಸ್ಥಾನದ ಬಸಪ್ಪನ ಮೆರವಣಿಗೆಯಲ್ಲಿ ತಂಬಿಟ್ಟಿನ ಆರತಿಯೊಂದಿಗೆ ತಮಟೆ, ನಗಾರಿ ಸದ್ದಿನ ಮೇಳದಲ್ಲಿ ಮೂರು ದೇವಸ್ಥಾನಗಳಿಗೂ ತಂಬಿಟ್ಟಿನ ತಂಪು ತೋರಿ ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ ಮುಖಂಡ ಹೊಸಹಳ್ಳಿ ಶಿವು ಮಾತನಾಡಿ, ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀಮಾರಮ್ಮ ದೇವತೆಗಳ ಪೂಜೆ ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ, ಹಿಂದೆ ತೀವ್ರ ಬೇಸಿಗೆಯ ಬಿಸಿಲಿನಿಂದಾಗಿ ಜನ ಮತ್ತು ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದಾಗ, ಹಿರಿಯರು ದೇವಿಗೆ ತಂಪು ತೋರುವ ವಿಶಿಷ್ಟ ಆಚರಣೆಯನ್ನು ಆರಂಭಿಸಿದರು. ಬಿಸಿಲಿನ ತಾಪವನ್ನು ತಗ್ಗಿಸಲು ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಈ ಪೂಜೆ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಹಬ್ಬವನ್ನು ಐದು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಕುಟುಂಬದವರು, ಅಕ್ಕ-ತಂಗಿ ಅತ್ತಿಗೆ ನಾದಿನಿಯರು ಜೊತೆಗೂಡಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಕಳೆದ ಎರಡು-ಮೂರು ವರ್ಷದಿಂದ ಮಾತ್ರ ಸರಳವಾಗಿ ಆಚರಿಸಿ ಬಂಧು-ಬಳಗ ಕರೆದು ಸಂಭ್ರಮಿಸುತ್ತೇವೆ ಎಂದು ಹಬ್ಬದ ಕುರಿತಂತೆ ಮಾಹಿತಿ ನೀಡಿದರು.


ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಹೊಸಹಳ್ಳಿ ಮತ್ತು ರಾಮನಹಳ್ಳಿ ಗ್ರಾಮದಲ್ಲಿರುವ ಶ್ರೀಬಿಸಿಲು ಮಾರಮ್ಮ, ಶ್ರೀತಂಪು ಮಾರಮ್ಮ ಹಾಗೂ ಶ್ರೀಮಾರಮ್ಮ ದೇವತೆಗಳಿಗೆ ಬೇಸಿಗೆಕಾಲದಲ್ಲಿ ಪೂಜೆ ಸಲ್ಲಿಸುವುದು ಸಾಂಪ್ರದಾಯಿಕ ಹಬ್ಬವಾಗಿದೆ. ಮೂರು ದಿನಗಳಿಂದ ಹಬ್ಬದ ಸಿದ್ಧತೆ ನಡೆಸಿ ತಂಬಿಟ್ಟನ್ನು ಮನೆಯಲ್ಲಿ ತಯಾರಿಸಿ ಪೂಜೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ನಮ್ಮ ನಂಬಿಕೆ. ಉತ್ತಮ ಮಳೆ ಬೆಳೆಯಾಗಲಿ ಸರ್ವರು ಸರ್ವ ರೋಗಗಳಿಂದ ಮುಕ್ತ ಜೀವನ ನಡೆಸಲು ಎಂಬುವುದು ಹಬ್ಬಗಳ ಆಶಯ ಎಂದರು.

ಇದೇ ವೇಳೆ ದೇವಾಲಯಗಳ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಬಿಸಿಲು ಮಾರಮ್ಮ ಬಸಪ್ಪ ಅವರಿಗೆ ಅಲಂಕಾರ ಮಾಡಲಾಗಿತ್ತು. ಹೊಸಹಳ್ಳಿ ರಾಮನಹಳ್ಳಿ ಯಜಮಾನರಾದ ಎಚ್.ಎಂ.ಸುರೇಶ್, ನಿಂಗೇಗೌಡ, ಸ್ವಾಮಿ, ಜೋಗಪ್ಪ ಮುಖಂಡರಾದ ನಾಗೇಶ್, ಶೇಖರ್ ಸೇರಿದಂತೆ ಹಲವರು ಹಾಜರಿದ್ದರು.