ಶ್ರಾವಣ ಮಾಸದ ಅಂಗವಾಗಿ ಉತ್ತರ ಕರ್ನಾಟಕದಲ್ಲಿಯೇ ಅತೀ ದೊಡ್ಡದಾದ ಅಗ್ನಿಕುಂಡ ಪ್ರವೇಶ ಜಾತ್ರಾ ಮಹೋತ್ಸವದ ಖ್ಯಾತಿಯ ಪಟ್ಟಣದ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗುತ್ತಲ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹಾಗೂ ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿಗಳು ಚಾಲನೆ ನೀಡಿದ್ದು, ಮಂಗಳವಾರ ಸಂಭ್ರಮದಿಂದ ಜರುಗಿತು.
ಗುತ್ತಲ: ಶ್ರಾವಣ ಮಾಸದ ಅಂಗವಾಗಿ ಉತ್ತರ ಕರ್ನಾಟಕದಲ್ಲಿಯೇ ಅತೀ ದೊಡ್ಡದಾದ ಅಗ್ನಿಕುಂಡ ಪ್ರವೇಶ ಜಾತ್ರಾ ಮಹೋತ್ಸವದ ಖ್ಯಾತಿಯ ಪಟ್ಟಣದ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗುತ್ತಲ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹಾಗೂ ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿಗಳು ಚಾಲನೆ ನೀಡಿದ್ದು, ಮಂಗಳವಾರ ಸಂಭ್ರಮದಿಂದ ಜರುಗಿತು.
ಜಾತ್ರೆಯ ಅಂಗವಾಗಿ ಬೆಳಗ್ಗೆ ಪುರವಂತರು ಶಿವನ ಲೀಲೆಗಳ ಒಡಪುಗಳ ಹೇಳುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮಾಳ ಹಾಗೂ ವಿವಿಧ ಸಂಪ್ರದಾಯಿಕ ವಾದ್ಯಗಳ ಮೂಲಕ ಮೆರವಣಿಗೆ ನಡೆಯಿತು. ಈ ವೇಳೆ ಪಟ್ಟಣದ ಆರಾಧ್ಯ ದೈವ ಶ್ರೀಹೇಮಗಿರಿ ಚನ್ನಬಸವೇಶ್ವರರ ಮಠಕ್ಕೆ ಗುಗ್ಗಳದ ಮೆರವಣಿಗೆ ಆಗಮಿಸಿದಾಗ ಪುರವಂತರಾದ ಬಸವರಾಜ ಗಂಗಣ್ಣನವರ ಉದ್ದನೆ ಶಸ್ತ್ರದ ಮೂಲಕ 108 ಮೀಟರ್ ಉದ್ದದ ದಾರವನ್ನು ನಾಲಿಗೆಯಲ್ಲಿ ಎಳೆಯುತ್ತಾ ಮೆರವಣಿಗೆ ಸಮಾಳದ ಶಬ್ದಕ್ಕೆ ತಕ್ಕಂತೆ ನಾಟ್ಯ ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.ಇದೇ ವೇಳೆ ಅನೇಕರು ತಮ್ಮ ಹರಕೆಯನ್ನು ತೀರಿಸಲು ಬಾಯಿ, ಕೈಗಳಿಗೆ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇದಲ್ಲದೆ ಬಸ್ ನಿಲ್ದಾಣದ ಸರ್ಕಲ್ ಬಳಿ ಶಿವಪ್ಪ ಇಚ್ಚಂಗಿ ಎಂಬ ಭಕ್ತನೋರ್ವ ಸಹ ಉದ್ದನೆ ದಪ್ಪನೆಯ ತಾಮ್ರದ ಸೂಜಿ ಮೂಲಕ ಪೋಣಿಸಲಾದ ನೂರಾರು ಮೀಟರ್ ಉದ್ದನೆ ದಾರವನ್ನು ತನ್ನ ನಾಲಿಗೆಯಲ್ಲಿ ಚುಚ್ಚಿಕೊಂಡ ಹೊರ ತೆಗೆದ ದೃಶ್ಯ ಗುತ್ತಲ ಸೇರಿದಂತೆ ಇತರೆ ಗ್ರಾಮಗಳ ಭಕ್ತರು ಹಾಗೂ ಪ್ರಯಾಣಿಕರ ಗಮನ ಸೆಳೆಯಿತು.ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಂಜೆ 5ಕ್ಕೆ ಸುಮಾರಿಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಸಂಪ್ರದಾಯದ ಪೂಜಾ ವಿಧಿ ವಿಧಾನ ನಂತರ ಪಾದೋದಕ, ನೇವೈದ್ಯವನ್ನು ಅಗ್ನಿಕುಂಡಕ್ಕೆ ಮಾಡಿದ ನಂತರ ದೊಡ್ಡದಾದ ಅಗ್ನಿಕುಂಡವನ್ನು ಪುರವಂತರು ಹಾಗೂ ನೂರಾರು ಭಕ್ತರು ಪ್ರವೇಶ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಈ ವೇಳೆ ಎಲ್ಲೆಡೆ ಹರ ಹರ ಮಹದೇವ ಜೈಘೋಷ ಕೇಳುತ್ತಿತ್ತು. ಮೆರವಣಿಗೆಯಲ್ಲಿ ಐರಣಿ ಮಠದ ಆನೆಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆಯಿತು. ಚಿಣ್ಣರು ಆನೆಯನ್ನು ಹತ್ತಿರದಿಂದ ನೋಡಿದ ಧನ್ಯತಾಭಾವ ಅವರ ಸಂತಸದಲ್ಲಿ ಕಂಡು ಬಂದಿತು.
ಅನ್ನಸಂತರ್ಪಣೆ: ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.