ಪೈಪೋಟಿ ಕಣವಾದ ನೌಕರರ ಸಂಘದ ಚುನಾವಣೆ

| Published : Dec 04 2024, 12:33 AM IST

ಸಾರಾಂಶ

ಯಾವುದೇ ರಾಜಕೀಯ ಪಕ್ಷಗಳಿಗೆ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಜರುಗುತ್ತಿರುವ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮೂರೂ ಬಣಗಳ ನಡುವೆ ತೀವ್ರ ಪೈಪೋಟಿ ಸೃಷ್ಠಿಯಾಗಿದ್ದು, ಇವರಲ್ಲಿ ನಿರ್ದೇಶಕ ಮತದಾರ ಯಾರು ಯಾರ ಮೇಲೆ ಒಲವು ತೋರಲಿದ್ದಾನೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರುಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಾಗೂ ಅದರಡಿಯ ವಿವಿಧ ಇಲಾಖೆಗಳ ತಾಲೂಕು, ಜಿಲ್ಲಾ ಸಮಿತಿಗಳ ಹುದ್ದೆಗೆ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಕಳೆದ ಒಂದೆರಡು ತಿಂಗಳಿನಿಂದ ನಡೆಯುತ್ತಿರುವ ಚುನಾವಣೆ ಕೊನೆ ಹಂತಕ್ಕೆ ಬಂದು ತಲುಪಿದ್ದು, ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ಬುಧವಾರ ಮತದಾನ ನಡೆಯುತ್ತಿದೆ.ಯಾವುದೇ ರಾಜಕೀಯ ಪಕ್ಷಗಳಿಗೆ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಜರುಗುತ್ತಿರುವ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮೂರೂ ಬಣಗಳ ನಡುವೆ ತೀವ್ರ ಪೈಪೋಟಿ ಸೃಷ್ಠಿಯಾಗಿದ್ದು, ಇವರಲ್ಲಿ ನಿರ್ದೇಶಕ ಮತದಾರ ಯಾರು ಯಾರ ಮೇಲೆ ಒಲವು ತೋರಲಿದ್ದಾನೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.ಯಾರ ನಡುವೆ ಸ್ಪರ್ಧೆ:

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ಒಟ್ಟು ಕ್ರಮವಾಗಿ ಅಧ್ಯಕ್ಷ ಹುದ್ದೆಗೆ ಆರು ಜನ ಮತ್ತು ರಾಜ್ಯ ಪರಿಷತ್ ಹಾಗೂ ಖಜಾಂಚಿ ಹುದ್ದೆಗೆ ತಲಾ ಮೂರು ಜನ ನಾಮಪತ್ರ ಸಲ್ಲಿಸಿದ್ದರು. ಕೊನೆ ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಭೀಮರಾಜ ಹವಾಲ್ದಾರ್, ಸುರೇಶ ಕುರ್ಡಿ, ರಾಘ ವೇಂದ್ರ ಅವರು ತಮ್ಮ ಉಮೇದುವಾರಿಕೆಗಳನ್ನು ವಾಪಸ್ಸು ಪಡೆದಿದ್ದರಿಂದ ಅಧ್ಯಕ್ಷ ಹಾಗೂ ಉಳಿದ ಎರಡು ಹುದ್ದೆಗಳ ಅಂತಿಮ ಕಣದಲ್ಲಿ ತಲಾ ಮೂವರು ಅಭ್ಯರ್ಥಿಗಳು ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕ ಮಹಾಂತೇಶ ಬಿರಾದಾರ್‌, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣ ಹಾಗೂ ಪ್ರೌಢ ಶಾಲೆ ಶಿಕ್ಷ ಆಂಜನೇಯ್ಯ ಕಾವಲಿ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಹಾಂತೇಶ ಬಿರಾದಾರ್‌ ತಂಡದಲ್ಲಿ ಖಜಾಂಚಿ ಹುದ್ದೆಗೆ ಖಲೀಲ್ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ವೆಂಕಟಾಚಲ ಅವರು, ಕೃಷ್ಣ ಅವರ ತಂಡದಲ್ಲಿ ಖಜಾಂಚಿ ಹುದ್ದೆಗೆ ಪ್ರಸನ್ನಕುಮಾರ ಹಾಗೂ ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ಹಸನ್ ಉಲ್‌ ಹಕ್ ಅವರು ಕಣಕ್ಕಿಳಿದಿದ್ದು, ಅದೇ ರೀತಿ ಆಂಜನೇಯ್ಯ ಕಾವಲಿ ಅವರ ತಂಡದಿಂದ ಖಜಾಂಚಿ ಹುದ್ದೆಗೆ ರಾಜಶೇಖರ್ ಮತ್ತು ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ವೆಂಕಟೇಶ್‌ ಡಿ. ಅವರು ಸ್ಪರ್ಧಿಸಿದ್ದಾರೆ.ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 8 ಸಾವಿರ ನೌಕರರು ಸಂಘದ ಸದಸ್ಯರಾಗಿದ್ದು, ಈಗಾಗಲೇ ವಿವಿಧ ಇಲಾಖೆವಾರು ಪ್ರತಿನಿಧಿಗಳಂತೆ 66 ನೌಕರರು ನಿರ್ದೇಶಕರಾಗಿ ಅದೇ ಪ್ರಕಾರ ಪ್ರತಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ 6 ಜನ ಆಯ್ಕೆಯಾಗಿದ್ದು, ಒಟ್ಟು 72 ಚುನಾಯಿತ ನಿರ್ದೇಶಕರು ಬುಧವಾರ ನಡೆಯಲಿರುವ ಮತದಾನದಲ್ಲಿ ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸದಸ್ಯರ ಆಯ್ಕೆಯನ್ನು ಮಾಡಲಿದ್ದಾರೆ.ಸಮರ್ಥರ ಆಯ್ಕೆಯ ಸವಾಲು:

ನೌಕರರ ಸಂಘದ ಚುನಾವಣೆಯಲ್ಲಿ ಸಮರ್ಥರ ಆಯ್ಕೆಯ ಸವಾಲು 72 ಜನ ನಿರ್ದೇಶಕರ ಮುಂದಿದೆ. ಕಳೆದ ಹಲವು ದಶಕಗಳಿಂದ ನೌಕರರ ಸಂಘಟನೆಯಲ್ಲಿ ಸಕ್ರಿಯ ವಾಗಿರುವ ಶಿಕ್ಷಕ ಮಹಾಂತೇಶ ಬಿರಾದಾರ್‌ ಅವರು ಕಳೆದ ಸಲ ನಿರ್ದೇಶಕರಾಗಿ ಹಾಗೂ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದೇ ವಿಶ್ವಾಸದ ಮೇಲೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಆಂಜನೇಯ್ಯ ಕಾವಲಿ ಅವರು ಶಿಕ್ಷಕರ ಸಂಘದಲ್ಲಿರುವ ಆಂಜನೇಯ್ಯ ಕಾವಲಿ ಹಾಗೂ ಆಹಾರ ಇಲಾಖೆ ಡಿಡಿಯಾಗಿರುವ ಕೃಷ್ಣ ಅವರು ಇದೇ ಮೊದಲ ಬಾರಿಗೆ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಲಕ್ಕನ್ನು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಅಧಿಕಾರಿ, ಹಣ, ಜಾತಿ ಹಾಗೂ ಅನ್ಯ ಬಲಪ್ರದರ್ಶನ ಜೋರಾಗಿ ಸಾಗಿದ್ದು, ಜೊತೆಗೆ ಪಾರ್ಟಿಗಳ ಮೇಲೆ ಪಾರ್ಟಿ ನೀಡಿ ನಾವೇನು ರಾಜಕೀಯ ನಾಯಕರಿಗಿಂತ ನಾವೇನು ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.