ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಭರವಸೆಯನ್ನು ಈಡೇರಿಸದ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ತಾಲೂಕು ಕಚೇರಿ ಮುಂಭಾಗ ಗುರುವಾರ ಆರಂಭಗೊಂಡಿದೆ.

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಭರವಸೆಯನ್ನು ಈಡೇರಿಸದ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ತಾಲೂಕು ಕಚೇರಿ ಮುಂಭಾಗ ಗುರುವಾರ ಆರಂಭಗೊಂಡಿದೆ.

ಮಜರಾಹೊಸಹಳ್ಳಿ, ದೊಡ್ಡತುಮಕೂರು ಭಾಗದ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ಒಳಚರಂಡಿ ಹೊಲಸು ತ್ಯಾಜ್ಯ ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕಾ ಘಟಕಗಳ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ನಿರಂತರವಾಗಿ ಹರಿದ ಪರಿಣಾಮ ಇಡೀ ಜಲಮೂಲಗಳು ಕಲುಷಿತಗೊಂಡಿವೆ. ಈ ಭಾಗದಲ್ಲಿ ಸಿಗುವ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯ ವರದಿ ತಿಳಿಸಿದೆ. ಕೃಷಿ ಹಾಗೂ ಹೈನುಗಾರಿಕೆಯ ಮೇಲೂ ಜಲ ಮಾಲಿನ್ಯದ ಅಪಾಯಕಾರಿ ಪರಿಣಾಮವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೊಡ್ಡತುಮಕೂರು, ಮಜರಾಹೊಸಹಳ್ಳಿ ಭಾಗದ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದು ಆಡಳಿತಶಾಹಿಯ ಜವಾಬ್ದಾರಿ. ಈ ಬಗ್ಗೆ ಹಲವು ಪ್ರತಿಭಟನೆ ಹೋರಾಟಗಳು ನಡೆದಾಗ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೊಟ್ಟ ಎಲ್ಲ ಭರವಸೆಗಳೂ ಹುಸಿಯಾಗಿವೆ. ಈ ಭಾಗಕ್ಕೆ 3ನೇ ಹಂತದ ಶುದ್ದೀಕರಣ ಮಾಡಿದ ನೀರು ಪೂರೈಸಬೇಕು. ಜಕ್ಕಲಮಡಗು ನೀರನ್ನು ಹಳ್ಳಿಗಳಿಗೆ ನೀಡಬೇಕು ಎಂಬ ಒತ್ತಾಯವನ್ನು ನಿರ್ಲಕ್ಷಿಸುತ್ತಲೇ ಬರಲಾಗಿದೆ ಎಂದು ಕಿಡಿ ಕಾರಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಬಂದ ತಹಸೀಲ್ದಾರ್‌ ಮಲ್ಲಪ್ಪ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಅಧಿಕಾರಶಾಹಿಗಳ ನಿರ್ಲಕ್ಷ್ಯ ಮತ್ತು ಉದಾಸೀನ ಧೋರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ವಾಗ್ವಾದವೂ ನಡೆಯಿತು.

22ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಗುರುವಾರದಿಂದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಯಿತು.