ಸಾರಾಂಶ
ಕೊಪ್ಪಳ:
ಬಿಎಸ್‌ಪಿಎಲ್ ಕಾರ್ಖಾನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿರುವುದನ್ನು ಕಂಪನಿ ಪ್ರತಿನಿಧಿಗಳೇ ಹೇಳಿಕೊಂಡಿರುವುದು ಮಾಧ್ಯಮದಲ್ಲಿ ವರದಿಯಾಗಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರ ಉದಾರೀಕರಣ ನೆಪದಲ್ಲಿ ಕಾರ್ಪೋರೇಟ್ ಪರವಾಗಿ ಇವೆ ಎನ್ನುವುದು ತಿಳಿದಿದ್ದು ನಾವೆಲ್ಲರು ಒಗ್ಗಟ್ಟಾಗಿ ಕಾರ್ಖಾನೆ ವಿರೋಧಿ ಹೋರಾಟವನ್ನು ತೀವ್ರಗೊಳಸಬೇಕಿದೆ ಎಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಡಿ.ಎಚ್. ಪೂಜಾರ ಮಾತನಾಡಿ, ಈಗಾಗಲೇ ಕಾರ್ಖಾನೆ ಸ್ಥಾಪಿಸುವ ದಿಸೆಯಲ್ಲಿ ಪ್ರಯತ್ನ ನಡೆದಿದೆ. ಇದರ ವಿರುದ್ಧ ಜನಾಂದೋಲನ ರೂಪಿಸಬೇಕಿದೆ ಎಂದರು.
ಹಿರಿಯ ಮುಖಂಡ ಮಹಾಂತೇಶ ಕೊತ್ಬಾಳ ಮಾತನಾಡಿ, ಜನಪ್ರತಿನಿಧಿಗಳು ಏನಾದರೂ ಮಾಡಲಿ. ನಾವು ಹೋರಾಟ ಮುಂದುವರಿಸುವ ಜತೆಗೆ ಗವಿಸಿದ್ಧೇಶ್ವರ ಶ್ರೀಗಳನ್ನು ಮತ್ತೆ ಆಹ್ವಾನಿಸೋಣ ಎಂದು ಹೇಳಿದರು.ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಸಜ್ಜನ ಮಾತನಾಡಿ, ಗವಿಶ್ರೀಗಳ ಆಜ್ಞೆಯಂತೆ ಹಿಟ್ನಾಳ ಕುಟುಂಬ ಸೇರಿದಂತೆ ಜನಪ್ರತಿನಿಧಿಗಳು ಕಾರ್ಖಾನೆ ಸ್ಥಾಪಿಸಲು ಯಾವುದೇ ಕಾರಣವಕ್ಕೂ ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅವರು ಸಹ ಬಿಎಸ್‌ಪಿಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಸ್ಥಾಪಿಸಕೂಡದು ಎಂದು ಹೇಳಿದ್ದಾರೆ. ಆದರೆ, ಕಾರ್ಖಾನೆಯವರು ಇದೀಗ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ. ಈ ಕುರಿತು ಹೋರಾಟ ಮುಂದುವರಿಸುವ ಕುರಿತು ಸಭೆ ಕರೆದು ಚರ್ಚಿಸಬೇಕಾಗಿದೆ ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಸುಮ್ಮನೆ ಕುಳಿತುಕೊಳ್ಳದೆ ಹೋರಾಟದ ಮೂಲಕ ಕೊಪ್ಪಳ ಕಾಪಾಡಿಕೊಳ್ಳಬೇಕಾಗಿದೆ. ಸದಾ ನಿಮ್ಮೊಂದಿಗೆ ವಕೀಲರ ಸಂಘ ಇರಲಿದೆ ಎಂದು ಅಭಯ ನೀಡಿದರು.ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ ಶಿವಕುಮಾರ ಕುಕನೂರು, ರಮೇಶ ತುಪ್ಪದ ಮಾತನಾಡಿ, ಭೂಮಿ ನೀಡದೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದವರಿಗೆ ಈಗ ನೋಟಿಸ್ ನೀಡಲಾಗಿದೆ. ಈ ಮೂಲಕ ಬಿಎಸ್‌ಪಿಎಲ್ ಕಂಪನಿ ತನ್ನ ಕಾರ್ಯ ಮುಂದುವರಿಸಿದೆ ಎಂದು ಸಭೆಯ ಗಮನಕ್ಕೆ ತಂದರು.
ಏ. 14ರಂದು ಜನಪ್ರತಿನಿಧಿಗಳ ಸಭೆ ಕರೆಯವುದು, ಏ. 15ರಂದು ಜಿಲ್ಲಾಧಿಕಾರಿ ಭೇಟಿ ಮತ್ತು ಭೂಮಿ ಕಳೆದುಕೊಂಡವರ ಸಭೆ ಕರೆದು ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಾಯಿತು.ಸಭೆಯಲ್ಲಿ ಕೆ.ಬಿ. ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಮುದಕಪ್ಪ ಹೊಸಮನಿ, ಬಸವರಾಜ ನರೇಗಲ್, ಮುಕ್ಬುಲ್ ಸಾಬ್, ಸುಂಕಪ್ಪ ನರೇಗಲ್ ಇದ್ದರು.