ಪಿಎಸ್‌ಐ ರಿತ್ತಿ ಅಮಾನತ್ತು ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ

| Published : Nov 04 2024, 12:21 AM IST

ಸಾರಾಂಶ

ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆಯ ವಿರುದ್ಧ ಅಲ್ಲ, ಕೇವಲ ಈರಪ್ಪ ರಿತ್ತಿ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ

ಲಕ್ಷ್ಮೇಶ್ವರ: ಗೋಸಾವಿ ಸಮಾಜದ ಮಹಿಳೆಯರ ಹಾಗೂ ಯುವಕರ ಮೇಲೆ ವಿನಾಕಾರಣ ಲಾಠಿ ಪ್ರಹಾರ ನಡೆಸಿದ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ಅಮಾನತ್ತು ಹಾಗೂ ಎತ್ತಂಗಡಿ ಮಾಡುವವರೆಗೆ ಶ್ರೀರಾಮ ಸೇನೆ ಹೋರಾಟ ನಿರಂತರವಾಗಿರುತ್ತದೆ ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.

ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗೋಸಾವಿ ಸಮಾಜ ಹಾಗೂ ಶ್ರೀರಾಮ ಸೇನೆ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆಯ ವಿರುದ್ಧ ಅಲ್ಲ, ಕೇವಲ ಈರಪ್ಪ ರಿತ್ತಿ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧವಾಗಿದೆ. ಆದ್ದರಿಂದ ಈರಪ್ಪ ರಿತ್ತಿ ಅವರನ್ನು ಅಮಾನತ್ತು ಮಾಡಬೇಕು ಹಾಗೂ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ ಅವರು, ಪಿಎಸ್‌ಐ ಈರಪ್ಪ ರಿತ್ತಿ ಮಾನಸಿಕ ಆರೋಗ್ಯ ಸರಿ ಇಲ್ಲವೆಂದು ಕಾಣುತ್ತದೆ. ಸೈಕೋ ರೀತಿ ವರ್ತನೆ ತೋರುತ್ತಿದ್ದಾರೆ. ಈ ಹಿಂದೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಮಾಯಕರ ಮೇಲೆ ದೌರ್ಜನ್ಯ ತೋರಿದ್ದರಿಂದ ಅಲ್ಲಿಯೂ ಅವರ ವಿರುದ್ಧ ಪ್ರತಿಭಟನೆ ನಡೆದಿದೆ. ಆದ್ದರಿಂದ ಇವರನ್ನು ಇಲ್ಲಿಯೇ ಮುಂದುವರೆಸಿದ್ದೇ ಆದಲ್ಲಿ ನ.7 ಅಥವಾ 8 ರಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. 10 ರಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.

ಈ ವೇಳೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಪ್ರಾಣೇಶ ವ್ಯಾಪಾರಿ, ಬಸವರಾಜ ಚಕ್ರಸಾಲಿ, ಕುಮಾರ ಕನಾಡಿಗೇರ, ಭರತ ಲದ್ದಿ, ಹರೀಶ್ ಗೋಸಾವಿ, ವೆಂಕಟೇಶ ದೊಡ್ಡಮನಿ, ಬಾಳಪ್ಪ ಗೋಸಾವಿ, ಸತೀಶ ಕುಂಬಾರ, ಗೋವಿಂದ ಗೋಸಾವಿ, ಚನ್ನು ಹಾಳತೋಟದ, ಅಶೋಕ ಅಯ್ಯನಗೌಡರ, ಕಿರಣ ಚಿಲ್ಲೂರಮಠ ಸೇರಿದಂತೆ ಗೋಸಾವಿ ಸಮಾಜದ ಮಹಿಳೆಯರು ಇದ್ದರು.