ಸಾರಾಂಶ
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬದಲ್ಲಿ ಐದರಿಂದ ಆರು ಸಾವಿರ ರುಪಾಯಿ ಉಳಿತಾಯ ಆಗುತ್ತಿದೆ. ಇದರಿಂದ ರಾಜ್ಯದ ಜನರ ಆರ್ಥಿಕ ಹೊರೆ ಕಡಿಮೆ ಆಗಿದೆ.
ಕೊಪ್ಪಳ: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬದಲ್ಲಿ ಐದರಿಂದ ಆರು ಸಾವಿರ ರುಪಾಯಿ ಉಳಿತಾಯ ಆಗುತ್ತಿದೆ. ಇದರಿಂದ ರಾಜ್ಯದ ಜನರ ಆರ್ಥಿಕ ಹೊರೆ ಕಡಿಮೆ ಆಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಅಳವಂಡಿ ಹಾಗೂ ಹಿರೇಸಿಂದೋಗಿ ಗ್ರಾಮದಲ್ಲಿ ಜರುಗಿದ ನೂತನ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪೌಂಡ್ ನಿರ್ಮಾಣ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ರಾಜ್ಯದ ಗ್ಯಾರಂಟಿ ಯೋಜನೆಗಳು ಸರ್ಕಾರ ರಚನೆಯಾಗಿ 8 ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುತ್ತಿರುವುದನ್ನು ಸಹಿಸದ ಬಿಜೆಪಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ ಎಂದು ಟೀಕಿಸಿದರು. ಆದರೆ ಸದ್ಯ ಈ ಯೋಜನೆಗಳನ್ನು ನೋಡಿ ಮೋದಿ ಗ್ಯಾರಂಟಿಗಳನ್ನು ನೀಡಲು ಮುಂದಾಗಿದ್ದಾರೆ. ಸುಳ್ಳಿನ ಬಿಜೆಪಿ ಸರ್ಕಾರವು ರಾಜ್ಯ ಮತ್ತು ರಾಷ್ಟ್ರದ ರೈತರ ಸಾಲವನ್ನು ಮನ್ನಾ ಮಾಡಲು ಆಗಲಿಲ್ಲ. ಹಿಂದೂಗಳ ಹಬ್ಬಕ್ಕೆ ಮೂರು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ವಾಗ್ದಾನ ಮಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸುಳ್ಳು ಭರವಸೆ ಈಡೇರಲಿಲ್ಲ ಎಂದರು.ನಮ್ಮ ಗ್ಯಾರಂಟಿಗಳು ಜನಪರ ಕಲ್ಯಾಣಕ್ಕಾಗಿ ಜಾರಿಗೆ ತಂದಿದ್ದು, ಈಗಾಗಲೇ ಸ್ತ್ರೀಶಕ್ತಿ ಯೋಜನೆಯಿಂದ 1 ಕೋಟಿ 60 ಲಕ್ಷ ಮಹಿಳೆಯರು ಪ್ರವಾಸ ಕೈಗೊಂಡು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಇದರಿಂದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಆದಾಯವು 4 ಪಟ್ಟು ಹೆಚ್ಚಾಗಿದ್ದು ಮಹಿಳೆಯರ ಸ್ವಾವಲಂಬನೆ ಬದುಕಿಗೆ ಗ್ಯಾರಂಟಿ ಯೋಜನೆ ಶ್ರೀರಕ್ಷೆಯಾಗಿದೆ ಎಂದರು.ಸಮಾನತೆ ತತ್ವದಡಿ ಸಮಪಾಲು ಸಮಬಾಳು ಎಂಬುದು ಸಿಎಂ ಸಿದ್ದರಾಮಯ್ಯ ಗುರಿಯಾಗಿದೆ. ಇಂತಹ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಪ್ರಥಮ ಮತ್ತು ದೊಡ್ಡ ಯೋಜನೆಗಳಾಗಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನಪರ ಜನ ಹಿತಕ್ಕಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ರೆಡ್ಡಿ, ಅನುಷ್ಠಾನ ಸಮಿತಿಯ ಅಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿಯ ಅಧ್ಯಕ್ಷ ವಿರುಪಾಕ್ಷ ಪಲ್ಟನ್, ಮುಖಂಡರಾದ ಭರಮಪ್ಪ ನಗರ, ವೆಂಕನಗೌಡ ಹಿರೇಗೌಡ್ರು, ಕೇಶವರೆಡ್ಡಿ ಮದ್ನೂರ್, ತಾಳೆಪ್ಪ ಪೂಜಾರಿ, ಪದ್ಮಾವತಿ ಕಂಬಳಿ, ಅಂದಾನ ಸ್ವಾಮಿ ಬೆಟಿಗೇರಿಮಠ, ಇಸ್ಮಾಯಿಲ್, ಹನುಮರೆಡ್ಡಿ ನಿಂಗಪ್ಪ ಯತ್ನಟ್ಟಿ ಇದ್ದರು.