ನಾಲ್ಕು ವರ್ಷದ ಪದವಿ ಹಿಂದಕ್ಕೆ ಪಡೆಯಲು ಆಗ್ರಹ

| Published : Mar 04 2024, 01:17 AM IST

ಸಾರಾಂಶ

ಎನ್ಇಪಿ ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವನ್ನುಂಟು ಮಾಡಿತು.

ಬಳ್ಳಾರಿ: ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ(ಎಐಡಿಎಸ್ಒ) ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ಸರ್ಕಾರ ಅತ್ಯಂತ ತರಾತುರಿಯಲ್ಲಿ ಯಾವುದೇ ಸಿದ್ಧತೆ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020)ಜಾರಿ ಮಾಡಿತು. ಎನ್ಇಪಿ ಭಾಗವಾಗಿದ್ದ ನಾಲ್ಕು ವರ್ಷದ ಪದವಿಯನ್ನು ಅಪ್ರಜಾತಾಂತ್ರಿಕವಾಗಿ ಹೇರಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕವನ್ನುಂಟು ಮಾಡಿತು. ಇದರ ವಿರುದ್ಧ ರಾಜ್ಯದಲ್ಲಿ ಹಲವಾರು ಹೋರಾಟಗಳು ನಡೆದು, ಎನ್‌ಪಿಯನ್ನು ಹಿಮ್ಮೆಟ್ಟಿಸಲಾಯಿತು. ಆದರೆ, ರಾಜ್ಯ ಸರ್ಕಾರ ನಾಲ್ಕು ವರ್ಷದ ಪದವಿಯನ್ನು ರದ್ದುಗೊಳಿಸುವ ಕುರಿತು ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಈರಣ್ಣ ಮಾತನಾಡಿ, ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ಆಗ್ರಹಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಕರ್ನಾಟಕದ 23 ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಸಮೀಕ್ಷೆಯನ್ನು ನಡೆಸಲಾಯಿತು. ಶೇ. 83ರಷ್ಟು ವಿದ್ಯಾರ್ಥಿಗಳು ನಾಲ್ಕು ವರ್ಷದ ಪದವಿ ಬೇಡವೆಂದು ಹೇಳಿದ್ದಾರೆ.

ಆದರೆ ರಾಜ್ಯ ಸರ್ಕಾರ ರಚಿಸಿರುವ ರಾಜ್ಯ ಶಿಕ್ಷಣ ಆಯೋಗವು ರಾಜ್ಯ ಶಿಕ್ಷಣ ನೀತಿ ಕುರಿತಾದ ಅಂತಿಮ ವರದಿಯನ್ನು ಆಗಸ್ಟ್‌ನಲ್ಲಿ ನೀಡುವುದಾಗಿ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಈ ವಿಳಂಬ ಧೋರಣೆ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷೆ ಉಮಾ, ಎಂ. ಶಾಂತಿ, ಪ್ರಮೋದ್, ಖಜಾಂಚಿ ಅನುಪಮಾ, ನಿಹಾರಿಕಾ, ಸತೀಶ್, ಹೊನ್ನೂರು ಸ್ವಾಮಿ ಸೇರಿದಂತೆ ಸಿಟಿ ಕಾಲೇಜು ಹಾಗೂ ಸರಳಾದೇವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.