ಕಬ್ಬಿಗೆ ನ್ಯಾಯಯುತ ಹಾಗೂ ಹೆಚ್ಚಿನ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತು ಬಂದ್ಗೆ ಶನಿವಾರ ನಿಡಗುಂದಿ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಕನ್ನಡಪ್ರಭ ವಾರ್ತೆ ನಿಡಗುಂದಿ
ಕಬ್ಬಿಗೆ ನ್ಯಾಯಯುತ ಹಾಗೂ ಹೆಚ್ಚಿನ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತು ಬಂದ್ಗೆ ಶನಿವಾರ ನಿಡಗುಂದಿ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದರು.ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಿ ಬೆಂಬಲ ವ್ಯಕ್ತಪಡಿಸಿದರು. ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಸಾಥ್ ನೀಡಿದರು. ಬಂದ್ಗೆ ಬೆಂಬಲವಾಗಿ ಪಟ್ಟಣದ ವರ್ತಕರು ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು. ಇದರಿಂದ ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶಗಳ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ರಸ್ತೆಗಳಲ್ಲಿ ಜನಸಂಚಾರವೂ ವಿರಳವಾಗಿತ್ತು.
ಬಂದ್ ನಡುವೆಯೂ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಘಟಕಗಳ ಬಸ್ಗಳು ಸಂಚಾರ ಮುಂದುವರಿಸಿದ್ದವು. ಆದರೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಸ್ ನಿಲ್ದಾಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಕಂಡುಬಂತು. ನಂತರ ಹೋರಾಟಗಾರರು ತಹಸೀಲ್ದಾರ್ ಎ.ಡಿ ಅಮರವಾದಗಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ರೈತ ಮುಖಂಡರಾದ ಸೀತಪ್ಪ, ಗಣಿ, ಶಶಿಕಾಂತ ಪಾಟೀಲ, ಪೀರಸಾಬ ನದಾಫ್, ತಿಪ್ಪಣ್ಣ ಅಮಾತೆಪ್ಪಗೌಡರ, ಕನ್ನಡಪರ ಸಂಘಟನೆ ಮುಖಂಡರಾದ ಆನಂದ ಹಡಗಲಿ, ರಾಜು ಚಳ್ಳಮರದ, ಚಂದ್ರು ಹಳೆಮನಿ, ಆನಂದ ಮೋಪಗಾರ ಇತರರಿದ್ದರು.