ನೆದರ್ಲ್ಯಾಂಡ್‌ನ ಟ್ವೆಂಟೆ ವಿವಿಗೆ ಮೊದಲ ಅಂಧ ವಿದ್ಯಾರ್ಥಿ!

| Published : Aug 15 2025, 01:00 AM IST

ನೆದರ್ಲ್ಯಾಂಡ್‌ನ ಟ್ವೆಂಟೆ ವಿವಿಗೆ ಮೊದಲ ಅಂಧ ವಿದ್ಯಾರ್ಥಿ!
Share this Article
  • FB
  • TW
  • Linkdin
  • Email

ಸಾರಾಂಶ

ಟಲಿಯ ಟ್ರೆಂಟೋ ವಿಶ್ವ ವಿದ್ಯಾಲಯದಲ್ಲಿ ಮಾನವ ಕಂಪ್ಯೂಟರ್‌ ಸಂವಹನ (ಹ್ಯುಮನ್‌ ಕಂಪ್ಯೂಟರ್‌ ಇಂಟ್ರ್ಯಾಕ್ಷನ್‌- HCI)ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ಹುಬ್ಬಳ್ಳಿಯ ಸುಹಾಸ ಧಾರವಾಡ (23) ನೆದರಲ್ಯಾಂಡ್‌ನ ಟ್ವೆಂಟೆ ವಿಶ್ವ ವಿದ್ಯಾಲಯದ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂಬ ಮಾತನ್ನು ಹುಬ್ಬಳ್ಳಿಯ ಅಂಧ ವಿದ್ಯಾರ್ಥಿಯೊಬ್ಬ ನಿಜವಾಗಿಸಿದ್ದಾನೆ. ಇಟಲಿಯ ಟ್ರೆಂಟೋ ವಿಶ್ವ ವಿದ್ಯಾಲಯದಲ್ಲಿ ಮಾನವ ಕಂಪ್ಯೂಟರ್‌ ಸಂವಹನ (ಹ್ಯುಮನ್‌ ಕಂಪ್ಯೂಟರ್‌ ಇಂಟ್ರ್ಯಾಕ್ಷನ್‌- HCI)ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ಹುಬ್ಬಳ್ಳಿಯ ಸುಹಾಸ ಧಾರವಾಡ (23) ನೆದರಲ್ಯಾಂಡ್‌ನ ಟ್ವೆಂಟೆ ವಿಶ್ವ ವಿದ್ಯಾಲಯದ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ. ಈ ಮೂಲಕ ಟ್ವೆಂಟೆ ವಿವಿಗೆ ಆಯ್ಕೆಯಾದ ದೃಷ್ಟಿಹೀನ ಮೊದಲ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಷಯ.

ಏನು ಈತನ ಸಾಧನೆ?: ನಗರದ ತೋಳನಕೆರೆಯ ಸಮೀಪದಲ್ಲಿ ವಾಸವಾಗಿರುವ ಸುಹಾಸ ಲಿಂಗರಾಜ ಧಾರವಾಡ ಪ್ರತಿಭಾವಂತ ವಿದ್ಯಾರ್ಥಿ. ಈತನ ತಂದೆ ಲಿಂಗರಾಜ ಧಾರವಾಡ ಹೆಲ್ತ್‌ ಇನ್ಸುರೆನ್ಸ್‌ ಸಲಹೆಗಾರರಾಗಿದ್ದಾರೆ. ತಾಯಿ ಗೃಹಿಣಿ. ಈ ದಂಪತಿಗೆ ಸುಹಾಸ ಒಬ್ಬನೆ ಮಗ.

ಹುಟ್ಟಿದಾಗ ಎಲ್ಲ ಮಕ್ಕಳಂತೆ ಚೆನ್ನಾಗಿಯೇ ಇದ್ದ ಸುಹಾಸಗೆ ಒಂದುವರ್ಷದವನಿದ್ದಾಗ ರೆಟಿನೋ ಬ್ಲಾಸ್ಟೋಮೋ ಎಂಬ ಕಾಯಿಲೆ ಬಂತು. ಅದರಿಂದಾಗಿ ಈತ ಸಂಪೂರ್ಣ ದೃಷ್ಟಿ ಹೀನನಾದ. ಆದರೆ, ದೃಷ್ಟಿಹೀನನಾದರೂ ಕಲಿಯುವ ಆಸಕ್ತಿ ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಒಂದರಿಂದ 6ನೆಯ ತರಗತಿ ವರೆಗೂ ಬ್ರೈಲ್‌ ಲಿಪಿಯಲ್ಲಿ ಬೆಂಗಳೂರು ಜ್ಯೋತಿ ಸೇವಾ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ. ಬಳಿಕ ಈತ ಸಾಮಾನ್ಯ ವಿದ್ಯಾರ್ಥಿಯಂತೆ ಹುಬ್ಬಳ್ಳಿ ಜೇಂಟ್ಸ್‌ ಸ್ಕೂಲ್‌ನಲ್ಲಿ 7ನೆಯ ತರಗತಿಗೆ ಪ್ರವೇಶ ಪಡೆದು ಎಸ್ಸೆಸ್ಸೆಲ್ಸಿವರೆಗೂ ಕಲಿತ. ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕಲಿತ, ತಾನೇನು ಕಮ್ಮಿಯಿಲ್ಲವೆಂಬಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ ಶೇ. 92 ಅಂಕ ಪಡೆದು ಪಾಸಾದ. ಬಳಿಕ ಹುಬ್ಬಳ್ಳಿ ಕೆಎಲ್‌ಇ ಕಾಮರ್ಸ್‌ ಕಾಲೇಜ್‌ನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಹಾಗೂ ಗ್ಲೋಬಲ್‌ ಕಾಲೇಜ್‌ನಲ್ಲಿ ಬಿಸಿಎ ಪದವಿ ಪಡೆದನು.

ಎಂಎಸ್‌ (ಎಚ್‌ಸಿಐ): ಇಷ್ಟೆಲ್ಲವನ್ನು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಕಲಿತ ಈತ, ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದುಕೊಂಡು ಇಟಲಿಯ ಟ್ರೆಂಟೋ ವಿವಿಯಲ್ಲಿ ಪ್ರಯತ್ನಿಸಿದ್ದಾನೆ. ಅಲ್ಲಿ ಈತನಿಗೆ ಎಂಎಸ್‌ (ಮಾಸ್ಟರ್‌ ಇನ್‌ ಹ್ಯೂಮನ್‌ ಕಂಪ್ಯೂಟರ್‌ ಇಂಟ್ರ್ಯಾಕ್ಷನ್‌)ನಲ್ಲಿ ಸೀಟು ಸಿಕ್ಕಿದೆ. ಅಲ್ಲಿ ಮೊದಲ ಎರಡು ಸೆಮಿಸ್ಟರ್‌ ಪಾಸಾಗಿದ್ದಾನೆ. ಇನ್ನುಳಿದ ಎರಡು ಸೆಮಿಸ್ಟರ್‌ಗಾಗಿ ನೆದರಲ್ಯಾಂಡ್‌ನ ಟ್ವೆಂಟೆ ವಿವಿಯಲ್ಲಿ ವಿನಿಮಯ ಕಾರ್ಯಕ್ರಮದಡಿ ಪ್ರಯತ್ನಿಸಿದ್ದಾರೆ. ವಿನಿಮಯ್‌ ಕಾರ್ಯಕ್ರಮದಡಿ 2 ಸೆಮಿಸ್ಟರ್‌ ಮಾಡಲು ಆಯ್ಕೆಯಾಗಿದ್ದಾರೆ.

ವಿನಮಯ ಕಾರ್ಯಕ್ರಮದಡಿ ನೆದರಲ್ಯಾಂಡ್‌ನ ಟ್ವೆಂಟೆ ವಿವಿಗೆ ಆಯ್ಕೆಯಾದ ಮೊದಲ ಅಂಧ ವಿದ್ಯಾರ್ಥಿಯಾಗಿದ್ದಾರೆ. ಆಗಸ್ಟ್‌ 22ರಂದು ಇಲ್ಲಿಂದ ನೆದರಲ್ಯಾಂಡ್‌ಗೆ ಹೊರಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಸಿಎವರೆಗೂ ಸಹಾಯಕರ ನೆರವಿನೊಂದಿಗೆ ಪರೀಕ್ಷೆ ಬರೆದು ಯಶಸ್ವಿಯಾಗಿದ್ದ ಸುಹಾಸ. ಇಟಲಿ ವಿವಿಯಲ್ಲಿ ಲ್ಯಾಪ್‌ಟ್ಯಾಪ್‌ನಲ್ಲಿ ಅಧ್ಯಯನ, ಪರೀಕ್ಷೆ ಬರೆದಿದ್ದಾರೆ. ಇದೀಗ ನೆದರಲ್ಯಾಂಡ್‌ನಲ್ಲೂ ಲ್ಯಾಪಟ್ಯಾಪ್‌ ಸಹಾಯದೊಂದಿಗೆ ಪರೀಕ್ಷೆ ಬರೆಯಲಿದ್ದಾರೆ.

ಎಂಎಸ್‌ನಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ, ಭಾಷಣ ಸಂಸ್ಕರಣೆ, ಕಂಪ್ಯೂಟರ್ ನೀತಿಶಾಸ್ತ್ರ ಮತ್ತು ಮಾನವ- ರೋಬೋಟ್ ವಿಷಯಗಳಿದ್ದು ಅದರಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.

ಮನೆಯಲ್ಲಿ ಸಂತಸ: ಅಂಧನಾದರೂ ಮಗನ ಸಾಧನೆ ನೋಡಿ ಮನೆಯಲ್ಲಿ ಸಂತಸವನ್ನುಂಟು ಮಾಡಿದೆ. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಚಿಕ್ಕ ಮಗುವಾಗಿದ್ದಾಗ ಕಾಯಿಲೆಯಿಂದ ದೃಷ್ಟಿ ಹೀನನಾದ. ಆದರೆ, ಅವನಿಗೆ ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದೆವು. ಇದೀಗ ಅಂತಾರಾಷ್ಟ್ರೀಯ ವಿವಿಯಲ್ಲಿ ಅಧ್ಯಯನ ಮಾಡಲು ಆಯ್ಕೆಯಾಗಿರುವುದು ಸಂತಸಕರ. ಈತನ ಅಧ್ಯಯನ ನೋಡಿಕೊಂಡು ಇಟಲಿ ವಿವಿಯ ಸ್ಕಾಲರ್‌ ಶಿಪ್‌ ಕೂಡ ಸಿಕ್ಕಿದೆ. ಇದು ಹೆಮ್ಮೆಯ ವಿಷಯ ಎಂದು ಪಾಲಕರು ಹರ್ಷವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಅಂಧ ವಿದ್ಯಾರ್ಥಿಯೊಬ್ಬ ಅಂತಾರಾಷ್ಟ್ರೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿ ತೆರಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

1ರಿಂದ 6ನೆಯ ತರಗತಿ ವರೆಗೂ ಮಾತ್ರ ಬ್ರೈಲ್‌ ಲಿಪಿಯಲ್ಲಿ ಕಲಿತಿದ್ದೆ. ನಂತರ ಸಾಮಾನ್ಯರಂತೆ ನನ್ನ ವಿದ್ಯಾಭ್ಯಾಸ ಮುಂದುವರಿಸಿದ್ದೇನೆ. ಇದೀಗ ಟ್ವೆಂಟೆ ವಿವಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಅಂಧ ವಿದ್ಯಾರ್ಥಿ ಸುಹಾಸ ಲಿಂಗರಾಜ ಧಾರವಾಡ ಹೇಳಿದರು.

ಚಿಕ್ಕವಯಸ್ಸಿನಲ್ಲಿ ಮಗನಿಗೆ ರೆಟಿನೋ ಬ್ಲಾಸ್ಟೋಮೋ ಕಾಯಿಲೆಯಿಂದ ದೃಷ್ಟಿಹೀನನಾದ. ಹೇಗಪ್ಪ ಈತನ ವಿದ್ಯಾಭ್ಯಾಸ ಎಂಬ ಚಿಂತೆ ಇತ್ತು. ಆದರೆ, ಬರಬರುತ್ತಾ ವಿದ್ಯಾಭ್ಯಾಸ ನೋಡಿ ಸಂತಸವಾಗುತ್ತದೆ. ಜತೆಗೆ ನನ್ನ ಮಗನ ಸಾಧನೆ ಹೆಮ್ಮೆಯೆನಿಸುತ್ತದೆ ಎಂದು ಸುಹಾಸ್‌ ತಂದೆ ಲಿಂಗರಾಜ ಧಾರವಾಡ ಹರ್ಷ ವ್ಯಕ್ತಪಡಿಸಿದರು.