ಸಾರಾಂಶ
ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ , ಹಿರಿಯ ಕಾಂಗ್ರೆಸಿಗ ಕೆ.ಎ. ಆದಂ ಅವರು ಅಧಿಕಾರ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ , ಹಿರಿಯ ಕಾಂಗ್ರೆಸಿಗ ಕೆ.ಎ. ಆದಂ ಅವರು ಅಧಿಕಾರ ಸ್ವೀಕರಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ತೆರೆಯಲಾಗಿರುವ ಕಚೇರಿಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಬಳಿಕ ಅಧಿಕಾರ ವಹಿಸಿಕೊಂಡ ಆದಂ ಅವರು, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚನೆಯಾದ ನಂತರದ ಪ್ರಥಮ ಅಧ್ಯಕ್ಷ ಎನಿಸಿದರು.
ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಕಾನೂನು ಚೌಕಟ್ಟಿನೊಳಗೆ ಪ್ರಾಧಿಕಾರ ಕೆಲಸ ನಿರ್ವಹಿಸಬೇಕಿದೆ. ಕಾನೂನು ಮೀರಿ ಯಾವುದೇ ಕಾರಣಕ್ಕೂ ಕೆಲಸ ಮಾಡಬಾರದು. ಅಧಿಕಾರ ಹಾಗೂ ಅವಕಾಶಗಳು ಸಿಕ್ಕಾಗ ಅದನ್ನು ಜನಸೇವೆಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪಟ್ಟಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್‍ಗೆ ಯೋಜನೆ ರೂಪಿಸಲಾಗುವುದು ಎಂದ ಶಾಸಕರು, ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಪಟ್ಟಣ ಪಂಚಾಯಿತಿಯಿಂದ 5 ಎಕರೆ ಜಾಗ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ನೂತನ ಅಧ್ಯಕ್ಷ ಕೆ.ಎ. ಆದಂ ಮಾತನಾಡಿ, ಇಲ್ಲಿನ ಪಟ್ಟಣ ಪಂಚಾಯಿತಿಗೆ ಹೊಂದಿಕೊಂಡಿರುವ ಬೇಳೂರು ಗ್ರಾ.ಪಂ. ಹಾನಗಲ್ಲು ಹಾಗೂ ಚೌಡ್ಲು ಗ್ರಾ.ಪಂ.ನ ಭಾಗಶಃ ಗ್ರಾಮಗಳು ಸೇರಿ ಒಟ್ಟು 1086.67 ಹೆಕ್ಟೇರ್ ಪ್ರದೇಶ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿವೆ. ಎಲ್ಲರ ಸಹಕಾರದಿಂದ ಕಾರ್ಯಚಟುವಟಿಕೆ ನಡೆಸಲಾಗುವುದು ಎಂದರು.ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಪಕ್ಷಕ್ಕಾಗಿ ದುಡಿದ, ಹಿರಿಯ ಕಾಂಗ್ರೆಸಿಗ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಉನ್ನತ ಹುದ್ದೆ ದೊರಕಿದೆ. ಉತ್ತಮವಾಗಿ ಕೆಲಸ ಮಾಡಿ ಸೋಮವಾರಪೇಟೆ ಅಭಿವೃದ್ಧಿಗೆ ರೂಪುರೇಷೆ ಹಾಕಿ ಶ್ರಮಿಸಬೇಕು ಎಂದು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್, ಪ್ರಾಧಿಕಾರದ ಸದಸ್ಯರಾದ ಬಿ.ಎನ್. ಬಸವರಾಜು, ಸಿ.ಪಿ. ದರ್ಶನ್, ಆರ್. ಲೋಹಿತಾಶ್ವ, ಎಂಜಿನಿಯರ್ ಸಿಂಧು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ. ನಾಚಪ್ಪ, ಸದಸ್ಯರು ಉಪಸ್ಥಿತರಿದ್ದರು. ಆದಮ್ ೧೯೯೬ರಿಂದ ಪಟ್ಟಣ ಪಂಚಾಯಾತ್ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷೆರಾಗಿ, ವಿರೋಧ ಪಕ್ಷದ ನಾಯಕರಾಗಿ ಪಟ್ಟಣದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಮಡಿಕೇರಿ ರಸ್ತೆಯ ಮಸೀದಿ ಅಭಿವೃದ್ಧಿಗೆ ಹಲವಾರು ಲಕ್ಷಗಳನ್ನು ಸರ್ಕಾರದೊಂದಿಗೆ ಸಂಪರ್ಕಿಸಿ ಅನುದಾನ ತಂದಿದ್ದಾರೆ. ಅವರ ಸೇವೆಗೆ ಪಕ್ಷ ಗುರುತಿಸಿದೆ ಎಂದು ಶಾಸಕ ಡಾ.ಮಂಥರ್ ಗೌಡ ಹೇಳಿದರು.;Resize=(128,128))
;Resize=(128,128))