ಕರ್ನಾಟಕದಿಂದ ಅಯೋಧ್ಯೆಗೆ ತೆರಳಿದ ಮೊದಲ ರೈಲು

| Published : Feb 08 2024, 01:31 AM IST

ಸಾರಾಂಶ

ಅಯೋಧ್ಯೆಗೆ ಕರ್ನಾಟಕದಿಂದ ಮೊಟ್ಟ ಮೊದಲ ರೈಲು ತುಮಕೂರಿನಿಂದ ತೆರಳಿದ್ದು, ನಗರದ ರೈಲ್ವೆ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಅಯೋಧ್ಯೆಗೆ ಕರ್ನಾಟಕದಿಂದ ಮೊಟ್ಟ ಮೊದಲ ರೈಲು ತುಮಕೂರಿನಿಂದ ತೆರಳಿದ್ದು, ನಗರದ ರೈಲ್ವೆ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ಬುಧವಾರ ಮುಂಜಾನೆ ನಗರದಿಂದ ಹೊರಟ ತುಮಕೂರು-ಅಯೋಧ್ಯೆ ಧಾಮ ಆಸ್ತಾ ವಿಶೇಷ ರೈಲಿನಲ್ಲಿ ತುಮಕೂರು ಜಿಲ್ಲೆಯ 180ಕ್ಕೂ ಅಧಿಕ ಪ್ರಯಾಣಿಕರು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವಿಶೇಷ ರೈಲು ಮುಂಜಾನೆ 5.45ಕ್ಕೆ ಅಯೋಧ್ಯಾ ನಗರಿಯತ್ತ ಪ್ರಯಾಣ ಬೆಳೆಸಿದ್ದು, ಸುಮಾರು 58 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಾಗಿದೆ. ಅಂದರೆ, ಶನಿವಾರ ಮಧ್ಯಾಹ್ನ ಈ ವಿಶೇಷ ರೈಲು ಅಯೋಧ್ಯೆ ತಲುಪಲಿದೆ. ಭಕ್ತರಿಗೆ ರೈಲ್ವೆ ಇಲಾಖೆ ಅಗತ್ಯ ಸೌಕರ್ಯ, ರಕ್ಷಣೆ ಒದಗಿಸಿದ್ದು, ಪ್ರಯಾಣಿಕರ ಸುರಕ್ಷಿತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆಹಾರದೊಂದಿಗೆ ಮಲಗುವ ಕೋಣೆಗಳನ್ನು ಒದಗಿಸಲಾಗಿದ್ದು, ಈ ರೈಲಿಗೆ ಸದಾ ಆರ್‌ಪಿಎಫ್ ಬೆಂಗಾವಲು ಸಹ ಇರಲಿದೆ.

ಪ್ರತಿ 4 ದಿನಗಳಿಗೊಮ್ಮೆ ಕರ್ನಾಟಕದ ಬೇರೆ ಬೇರೆ ನಿಲ್ದಾಣಗಳಿಂದ ಅಯೋಧ್ಯೆಗೆ ರೈಲು ತೆರಳಲಿದ್ದು, ಕರ್ನಾಟಕದಿಂದ ಮೊದಲ ತಂಡವಾಗಿ ಅಯೋಧ್ಯೆಗೆ ಹೊರಟ ಭಕ್ತರು ತಲಾ 3 ಸಾವಿರ ರು. ಪಾವತಿಸಿದ್ದು, ಅಯೋಧ್ಯೆ ಶ್ರೀ ರಾಮ ದರ್ಶನಕ್ಕಾಗಿ ಆರು ದಿನಗಳ ಪ್ರವಾಸ ಹೊರಟಿದ್ದಾರೆ.

ಪ್ರಭು ಶ್ರೀ ರಾಮನ ದರ್ಶನಕ್ಕೆ ತೆರಳಿದ ಜಿಲ್ಲೆಯ ರಾಮ ಭಕ್ತರಿಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಸಕರು, ಬಿಜೆಪಿ ಮುಖಂಡರು ಶುಭ ಕೋರಿ ಬೀಳ್ಕೊಟ್ಟರು.