ಸಾರಾಂಶ
ಚಿಕ್ಕಬಳ್ಳಾಪುರ : ದೇಶದಲ್ಲೇ ಬಡ, ಮದ್ಯಮ ವರ್ಗದ ಎಲ್ಲ ಸಮುದಾಯದ ಸೇವಾ ಯೋಜನೆಗಳಾದ ‘ಪಂಚ ಗ್ಯಾರಂಟಿ’ಗಳು ಇಂದು ದೇಶದಲ್ಲಿ ಎಲ್ಲಡೆ ಅನುಷ್ಠಾನ ವಾಗುತ್ತಿವೆ. ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದ ಈ ಯೋಜನೆಗಳು ಈಗ ದೇಶವೇ ಮೆಚ್ಚುವ ಯೋಜನೆಗಳಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ.97ರಷ್ಟು ಅನುಷ್ಠಾನ
ಪಂಚ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಗಳು ಈ ವರೆಗೆ ಅನಿವಾರ್ಯ ಕಾರಣಗಳಿಂದ ವಂಚಿತರಾಗಿದ್ದಲ್ಲಿ ಅಂತಹವರು ಕೂಡಲೆ ಸಂಬಂಧಪಟ್ಟ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಯೋಜನೆಗಳ ಸೌಲಭ್ಯವನ್ನು ಪಡೆಯಬಹುದು. ಈ ಬಗ್ಗೆ ಪ್ರಚಾರದ ಮೂಲಕ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗಿದೆ. ರಾಜ್ಯದಲ್ಲೆಯೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ. 97 ರಷ್ಟು ಅನುಷ್ಠಾನ ಮಾಡಲಾಗಿದೆ. ಆದರೆ ಯುವನಿಧಿ ಕೊಂಚ ಹಿಂದೆ ಉಳಿದಿದೆ ಎಂದರು.
ಬಡ, ಮಧ್ಯಮ ವರ್ಗಕ್ಕೆ ಶಕ್ತಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗಗದವರಿಗೆ ಆರ್ಥಿಕ ಶಕ್ತಿ ತುಂಬಿದಂತಾಗಿದೆ. ಈ ಯೋಜನೆಗಳಿಂದ ಉಳಿತಾಯವಾದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಔಷಧಿ ಖರೀದಿ, ಮನೆ ನಿರ್ಮಾಣ, ಕೊಳವೆ ಬಾವಿ ಕೊರೆಯಲು, ಆರೋಗ್ಯ ಚಿಕಿತ್ಸೆಗೆ ಹೀಗೆ ಇನ್ನೂ ಹಲವು ಉಪಯುಕ್ತ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುವ ಮೂಲಕ ಸರ್ಕಾರದ ಆಶಯಕ್ಕೆ ಸಾರ್ಥಕತೆಯನ್ನು ಜನರು ನೀಡಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್,ಗ್ಯಾರಂಟಿಯೋಜನೆಯ ಎಲ್ಲಾ ಸದಸ್ಯರು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.