ಭಟ್ಕಳದಲ್ಲಿ ಆಹಾರವೇ ಆರೋಗ್ಯದ ಕುರಿತು ಉಪನ್ಯಾಸ

ಕನ್ನಡಪ್ರಭ ವಾರ್ತೆ ಭಟ್ಕಳ

ಕಾರ್ಪೊರೇಟ್ ಕಂಪೆನಿಗಳು ತಮ್ಮ ಲಾಭಕ್ಕಾಗಿ ಇಂದಿನ ಜನರಿಗೆ ಅಕ್ಕಿ, ಗೋಧಿ ತಿನ್ನಿಸಿ ನಮ್ಮನ್ನು ಕಾಯಿಲೆಗೆ ದೂಡುವ ಮೂಲಕ ದೀರ್ಘಾವಧಿ ಲಾಭ ಪಡೆಯುತ್ತಿವೆ. ಈಗ ನಾವು ತಿನ್ನುವ ಆಹಾರವೇ ನಮಗೆ ಕಾಯಿಲೆ ಆಗಿ ಕಾಡುತ್ತಿದೆ ಎಂದು ಆಹಾರ ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ ಡಾ.‌ ಖಾದರ್‌ ವಲಿ ಹೇಳಿದರು.

ಭಾನುವಾರ ಪಟ್ಟಣದ ನಾಗಯಕ್ಷೆ ಸಭಾಭವನದಲ್ಲಿ ಆಹಾರವೇ ಆರೋಗ್ಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನ‌ ಕಾಲದಲ್ಲಿ ಜನರು ಅಕ್ಕಿ, ಗೋಧಿಯನ್ನು ಹೆಚ್ಚಾಗಿ ತಿನ್ನುತ್ತಿರಲಿಲ್ಲ. ಹಾಗಾಗಿ ಕಾಯಿಲೆ‌ ಮುಕ್ತ ಜೀವನ ನಡೆಸುತ್ತಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಹಾಗೂ ಪಟ್ಟಣದ ಜನರಿಗೆ ಒಂದೇ ತರಹದ ಕಾಯಿಲೆ ಭಾದಿಸುತ್ತಿದೆ. ಇಂದು ಫಾರಿನ್ ಕಂಪೆನಿಗಳು ಪೇಟೆಂಟ್ ಮೂಲಕ ನಮ್ಮನ್ನು ಆಳುತ್ತಿವೆ. ಕಾರ್ಪೊರೇಟ್‌ ಮಾಯಾಜಾಲಕ್ಕೆ ಸಿಲುಕಿದ ನಾವು ಅಕ್ಕಿ, ಗೋಧಿ ತಿಂದು ನಮ್ಮ ದೇಹದ ಸಕ್ಕರೆ‌ ಮಟ್ಟವನ್ನು ಜಾಸ್ತಿ ಮಾಡಿಕೊಂಡು ಕಾಯಿಲೆಗೆ ತುತ್ತಾಗಿ ದೀರ್ಘಾವಧಿ ಚಿಕಿತ್ಸೆಯಿಂದ ಬಳಲುತ್ತಿದ್ದೇವೆ ಎಂದರು.


ಹಿಂದಿನ ಕಾಲದಲ್ಲಿ ಅಕ್ಕಿ, ಗೋದಿಯನ್ನು ಹೆಚ್ಚು ಸೇವನೆ ಮಾಡದೇ ಸಿರಿಧ್ಯಾನ್ಯಗಳನ್ನೆ ಎಲ್ಲರೂ ಬಳಸುತ್ತಿದ್ದರು. ಸಿರಿಧ್ಯಾನಗಳಲ್ಲಿರುವ ನಾರಿನಾಂಶ ಬಳಕೆಯಿಂದ ಸ್ವಸ್ಥ ಆರೋಗ್ಯ ಹೊಂದುತ್ತಿದ್ದರು. ಆದರೆ ನಾವು ಇಂದು ಬೇಗ ಕಾಯಿಲೆ ಬರುವ ಆಹಾರವನ್ನು ಸೇವಿಸುತ್ತಿದ್ದೇವೆ ಎಂದರು.

ನಾಗಯಕ್ಷೆ ಧರ್ಮದೇವಿ ಸಂಸ್ಥಾನ‌ದ ಧರ್ಮದರ್ಶಿ ರಾಮದಾಸ ಪ್ರಭು ಮಾತನಾಡಿ, ಸಾವಯವ ಕೃಷಿ ಬೇಸಾಯದಿಂದ ಬೆಳೆದ ಬೆಳೆಕಾಳುಗಳು ದುಬಾರಿಯಾದರೂ ಕಲಬೆರಕೆ ಮುಕ್ತವಾಗಿರುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೆಡಿಮೇಡ್ ಆಹಾರಗಳು ವಿಷ ಪದಾರ್ಥವಾಗಿದ್ದು, ಆರೋಗ್ಯಕರ ಜೀವನ ನಡೆಸಲು ವಿಷಯುಕ್ತ ಆಹಾರ ಪದಾರ್ಥಗಳನ್ಮು ತ್ಯಜಿಸಬೇಕು ಎಂದರು.

ವೇದಿಕೆಯಲ್ಲಿ ಅಹಾರ ವಿಜ್ಣಾನಿ ಡಾ. ಖಾದರ್ ವಲಿ, ಯೋಗಗುರು ಗೋವಿಂದ ಗುರೂಜಿ, ಡಾ. ಸುನೀಲ‌ ಜತ್ತಣ್ಣ, ಪ್ರಕಾಶ ಹೊಳ್ಳೆರಿ ಹಾಗೂ ಆಹಾರ ತಜ್ಞೆ ಅರುಣಾ ತಿಮ್ಮಾಪುರ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು. ಸ್ಪಂದನಾ ಚಾರಿಟೇಬಲ್ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕಿರಣ ಕಾಯ್ಕಿಣಿ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ರಮೇಶ ಖಾರ್ವಿ, ನಿತಿನ‌ ನಾಯ್ಕ, ಸರ್ಪನಕಟ್ಟೆ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ವಾಸು ನಾಯ್ಕ, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಅಧ್ಯಕ್ಷ ವಸಂತ ನಾಯ್ಕ ಜಾಲಿ, ಜಯರಾಜ ಮೊಗೇರ, ವಿಷ್ಣು ನಾಯ್ಕ, ಭಟ್ಕಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್‌. ನಾಯ್ಕ, ಕನ್ಮಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಮೆಸ್ಕಾಂ ಎಂಜಿನಿಯರ್ ಶಿವಾನಂದ ನಾಯ್ಕ ಮುಂತಾದವರಿದ್ದರು.