ಪ್ರಕೃತಿಯ ಜೀವ ಸಂಕುಲದ ದಾಹ ತಣಿಸಲು ಮುಂದಾದ ಅರಣ್ಯ ಇಲಾಖೆ

| Published : Mar 22 2024, 01:09 AM IST

ಪ್ರಕೃತಿಯ ಜೀವ ಸಂಕುಲದ ದಾಹ ತಣಿಸಲು ಮುಂದಾದ ಅರಣ್ಯ ಇಲಾಖೆ
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಲಿದೆ. ಕೊಳವೆಬಾವಿಗಳ ಅಂತರ್ಜಲ ಕುಸಿಯತೊಡಗಿದೆ. ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚುತ್ತಲಿದೆ. ಕೊಳವೆಬಾವಿಗಳ ಅಂತರ್ಜಲ ಕುಸಿಯತೊಡಗಿದೆ. ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ಅರಣ್ಯದಲ್ಲಂತೂ ಕಾಡುಪ್ರಾಣಿ, ಪಕ್ಷಿಗಳ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದಿಗ್ಧತೆಯಲ್ಲಿ ಕಾಡುಪ್ರಾಣಿ, ಪಕ್ಷಿಗಳ ದಾಹ ತೀರಿಸುವ ಕಾರ್ಯಕ್ಕೆ ಹರಪನಹಳ್ಳಿ ತಾಲೂಕು ಅರಣ್ಯ ಇಲಾಖೆ ಮುಂದಾಗಿದೆ.ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಇಲಾಖೆಯು ಸಿಮೆಂಟಿನ ತೊಟ್ಟಿಗಳನ್ನು ಇಟ್ಟು, ಅವುಗಳಿಗೆ ಟ್ಯಾಂಕರ್ ಮೂಲಕ ಅಥವಾ ಸಿಬ್ಬಂದಿ ನೆರವಿನಿಂದ ನೀರನ್ನು ತುಂಬಿಸುವ ಕಾರ್ಯ ಭರದಿಂದ ಸಾಗಿದೆ.24,500 ಹೆಕ್ಟೇರ್‌ ಅರಣ್ಯ ಪ್ರದೇಶ:ತಾಲೂಕಿನಲ್ಲಿ 24,500 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಅದರಲ್ಲಿ ಕರಡಿ, ಚಿರತೆ, ಕೋತಿ, ಕಾಡುಹಂದಿ, ನರಿ, ತೋಳ, ಮುಳ್ಳುಹಂದಿ, ನವಿಲು, ಮುಂಗುಸಿ, ಹಾವು ಮುಂತಾದ ಪ್ರಾಣಿಗಳಿದ್ದು, ಈ ಪ್ರಾಣಿಗಳಿಗೆ ನೀರಿನ ತೊಂದರೆ ಎದುರಾಗಿದೆ. ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಸಂಭವವಿದೆ. ಇಲಾಖೆ ಅವು ನಾಡಿಗೆ ಬಾರದಂತೆ, ಅವುಗಳ ಜೀವ ರಕ್ಷಣೆಗಾಗಿ ನೀರುಣಿಸುವ ಕಾರ್ಯಕ್ಕೆ ಮುಂದಾಗಿದೆ.ಜಾಜಿಕಲ್ಲು ಕಾದಿಟ್ಟ ಅರಣ್ಯ ಪ್ರದೇಶ, ಉಚ್ಚಂಗಿದುರ್ಗ, ಜಿಟ್ಟನಕಟ್ಟಿ, ಹ್ಯಾರಡ ಹೀಗೆ ಹೆಚ್ಚಿನ ಮಟ್ಟದಲ್ಲಿ ಇರುವ ಅರಣ್ಯ ಪ್ರದೇಶದ ಸೇರಿದಂತೆ ವಿವಿಧೆಡೆ 100ಕ್ಕೂ ಹೆಚ್ಚು ತೊಟ್ಟಿಗಳನ್ನು ಇಡಲಾಗಿದೆ.ವಾರಕ್ಕೆರಡು ಬಾರಿ ನೀರು:ಆ ತೊಟ್ಟಿಗಳಿಗೆ ವಾರಕ್ಕೆರಡು ಬಾರಿ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತದೆ. ಇದರಿಂದ ಕಡು ಬೇಸಿಗೆಯಲ್ಲಿ ಪ್ರಾಣಿಗಳ ದಾಹ ತೀರಿದಂತೆಯೂ ಹಾಗೂ ಪ್ರಾಣಿಗಳು ನೀರು ಅರಸಿ ಊರಿಗೆ ಆಗಮಿಸಿ ಜನರಿಗೆ ತೊಂದರೆ ಕೊಡುವುದನ್ನು ತಡೆಗಟ್ಟಿದಂತಾಗಿದೆ.ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಾಗ ಸಾರ್ವಜನಿಕರು ಕೂಡಲೇ ನಮ್ಮ ಗಮನಕ್ಕೆ ತರಬೇಕು ಎಂಬುದು ಅರಣ್ಯ ಅಧಿಕಾರಿಗಳ ಮನವಿಯಾಗಿದೆ.ಕೂಡ್ಲಿಗಿ ಎಸಿಎಫ್‌ ಬಾಬು ಮಾರ್ಗದರ್ಶನದಲ್ಲಿ ಇಲ್ಲಿಯ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಹಾಗೂ ಸಿಬ್ಬಂದಿ ಈ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಪ್ರಕೃತಿಯ ಜೀವಸಂಕುಲ ಉಳಿಸುವ ಇವರ ಕಾರ್ಯ ಸಾರ್ವಜನಿಕ ಪ್ರಸಂಸೆಗೆ ಪಾತ್ರವಾಗಿದೆ.ಇಂದಿನ ಕಡು ಬಿಸಿಲಿಗೆ ಮನುಷ್ಯರೇ ಬಸವಳಿದಿದ್ದಾರೆ. ಇನ್ನು ಪ್ರಾಣಿಗಳ ಕಷ್ಟ ಹೇಳತೀರದು. ಅದನ್ನು ಮನಗಂಡು ಹರಪನಹಳ್ಳಿ ತಾಲೂಕಿನ ವಿವಿಧ ಅರಣ್ಯ ಪ್ರದೇಶದಲ್ಲಿ ನಮ್ಮ ಸಿಬ್ಬಂದಿ ತೊಟ್ಟಿಗಳನ್ನು ಇಟ್ಟು ನೀರನ್ನು ತುಂಬಿಸಿ ಪ್ರಾಣಿಗಳ ದಾಹ ತೀರಿಸುತ್ತಿದ್ದಾರೆ ಎನ್ನುತ್ತಾರೆ ಉಪಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್‌.ಮಳೆ ಇಲ್ಲದೇ ಅರಣ್ಯದಲ್ಲಿ ನೀರು ಇಲ್ಲದಂತಾಗಿದೆ. ಕಾಡು ಪ್ರಾಣಿಗಳಿಗೆ ನೀರು ಒದಗಿಸುವುದರ ಜೊತೆಗೆ ಅವು ನಾಡಿಗೆ ಬಂದು ಜನರಿಗೆ ತೊಂದರೆ ಕೊಡಬಾರದೆಂದು ಈ ರೀತಿ ತೊಟ್ಟಿಗಳನ್ನು ಇಟ್ಟು ನೀರು ತುಂಬಿಸಿದ್ದೇವೆ. ಮಳೆ ಬಂದು ಅರಣ್ಯದ ಗುಂಡಿಗಳಲ್ಲಿ ನೀರು ಸಂಗ್ರಹವಾಗುವವರೆಗೂ ಈ ಕಾರ್ಯ ಮುಂದುವರೆಯುತ್ತದೆ ಎನ್ನುತ್ತಾರೆ ಹರಪನಹಳ್ಳಿ ವಲಯಾರಣ್ಯಾಧಿಕಾರಿ ಕೆ.ಮಲ್ಲಪ್ಪ.