ಸಾರಾಂಶ
ಬಂಗಾರಪೇಟೆ ತಾಲೂಕಿನ ತಳೂರು ಗ್ರಾಮದಲ್ಲಿ ಕೆಲವರು ಅರಣ್ಯ ಇಲಾಖೆಯ ಜಾಗವನ್ನು ಆಕ್ರಮಿಸಿಕೊಂಡು ಬೇಲಿ ಹಾಕಿಕೊಂಡಿದ್ದರು, ಇದನ್ನು ತಡೆಗಟ್ಟುವ ಸಲುವಾಗಿ ಇಲಾಖೆ ಒತ್ತುವರಿಯನ್ನು ತೆರವುಗೊಳಿಸಲು ಬೇಲಿ ಹಾಕಿದೆ. ಇದನ್ನು ಅರಿಯದ ಮಾಜಿ ಸಂಸದರು ಮಲ್ಲೇಶನಪಾಳ್ಯಕ್ಕೆ ಹೋಗುವ ರಸ್ತೆಯನ್ನು ಅರಣ್ಯ ಇಲಾಖೆ ಮುಚ್ಚಿದೆ ಎಂದು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅರಣ್ಯ ಇಲಾಖೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮರಗಳನ್ನು ಕಟಾವು ಮಾಡುತ್ತಿರುವುದರಿಂದ ಅರಣ್ಯ ಇಲಾಖೆ ಅದನ್ನು ತಡೆದಿದೆಯೇ ಹೊರತು ಯಾವುದೇ ರಸ್ತೆಯನ್ನು ಮುಚ್ಚಿಲ್ಲ. ಆದರೆ ಕೆಲವರು ಮಾಹಿತಿ ಕೊರತೆಯಿಂದ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದರು.ತಾಲೂಕಿನ ತೊಪ್ಪನಹಳ್ಳಿ ಗ್ರಾಪಂಃಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸೆಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವೆ ನಂ೧೧ರಲ್ಲಿ ತಳೂರು ಗ್ರಾಮದ ಕೆಲವರು ಅರಣ್ಯ ಇಲಾಖೆಯ ಜಾಗವನ್ನು ಆಕ್ರಮಿಸಿಕೊಂಡು ಬೇಲಿ ಹಾಕಿಕೊಂಡಿದ್ದರು, ಇದನ್ನು ತಡೆಗಟ್ಟುವ ಸಲುವಾಗಿ ಇಲಾಖೆ ಒತ್ತುವರಿಯನ್ನು ತೆರವುಗೊಳಿಸಲು ಬೇಲಿ ಹಾಕಿದೆ ಎಂದರು.ಮಾಹಿತಿ ಪಡೆಯದೆ ಆರೋಪ
ಇದನ್ನು ಅರಿಯದ ಮಾಜಿ ಸಂಸದರೊಬ್ಬರು ಮಲ್ಲೇಶನಪಾಳ್ಯಕ್ಕೆ ಹೋಗುವ ರಸ್ತೆಯನ್ನು ಅರಣ್ಯ ಇಲಾಖೆ ಮುಚ್ಚಿದೆ ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ. ಈಗ ಸಾಕರಸನಹಳ್ಳಿ ಮೂಲಕ ರಸ್ತೆ ನಿರ್ಮಾಣ ಮಾಡಿಕೊಡಲಾಗಿದೆ, ಅಲ್ಲದೆ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಅವುಗಳನ್ನು ತಡೆಯಲು ಇಲಾಖೆ ಇದ್ದ ತಾತ್ಕಾಲಿಕ ರಸ್ತೆಯನ್ನು ಬಂದ್ ಮಾಡಿ ಬೇಲಿ ಹಾಕಿದೆ ಎಂದರು.ಈ ಹಿಂದೆ ಈ ಗಡಿ ಭಾಗದ ಗ್ರಾಮಗಳಲ್ಲಿ ಕನಿಷ್ಟ ನಾಗರೀಕ ಸೌಲಭ್ಯಗಳಿರಲಿಲ್ಲ, ಈಗ ಅಭಿವೃದ್ದಿಯಾಗಿದೆ, ಕಳವಂಚಿ ವೃತ್ತ ಅಭಿವೃದ್ದಿಗೆ ೧.೨೦ಕೋಟಿ ಮಂಜೂರಾಗಿದೆ, ವೃಷಭಾವತಿ ಕೆರೆಯಿಂದ ವ್ಯರ್ಥವಾಗಿ ಹರಿಯುವ ನೀರನ್ನು ತಡೆದು ಡ್ಯಾಂ ಕಟ್ಟಲು ಡಿಪಿಆರ್ ಸಿದ್ದವಾಗುತ್ತಿದೆ,ಇದು ನನ್ನ ಕನಸು ಎಂದರು.ಗ್ರಾಪಂ ಅಧ್ಯಕ್ಷ ಪ್ರಭಾಕರ್‌ರೆಡ್ಡಿ, ಉಪಾಧ್ಯಕ್ಷ ಹಂಸಾನಂದ, ತಾಪಂ ಇಒ ರವಿಕುಮಾರ್, ಬಿಇಒ ಗುರುಮೂರ್ತಿ, ಪಿಡಿಒ ಮಂಧುಚಂದ್ರ, ಸಿಡಿಪಿಒ ಮುನಿರಾಜು, ತೋಟಗಾರಿಗೆ ಶಿವಾರೆಡ್ಡಿ, ಕೃಷಿ ಇಲಾಖೆ ಪ್ರತಿಭಾ, ಅ.ನಾ.ಹರೀಶ್ ಇತರರು ಇದ್ದರು.