ಮುಡಾ ಹರಗಣದಲ್ಲಿ ಈಗಾಗಲೇ ರಾಜ್ಯಪಾಲರು ವಿಚಾರಣೆಗೆ ಕೊಟ್ಟಿದ್ದಾರೆ, ಈಗೇನಿದ್ದರೂ ಕಾನೂನಿನ ಹೋರಾಟ ಮಾತ್ರ ಉಳಿದಿದೆ. ಈ ಕುರಿತು ಕ್ಯಾಬಿನೆಟ್ ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಹುಬ್ಬಳ್ಳಿ:
ರಾಜ್ಯಪಾಲರ ಹುದ್ದೆಗೆ ಮೊದಲಿದ್ದ ಘನತೆ, ಗೌರವ ಇಂದು ಉಳಿದಿಲ್ಲ. ಯಾರೇ ಆಗಲಿ ಉನ್ನತ ಸ್ಥಾನದಲ್ಲಿದ್ದಾಗ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಚಿವ ಶಿವಾನಂದ ಪಾಟೀಲ ಗಂಭೀರ ಆರೋಪ ಮಾಡಿದರು.ಅವರು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹರಗಣದಲ್ಲಿ ಈಗಾಗಲೇ ರಾಜ್ಯಪಾಲರು ವಿಚಾರಣೆಗೆ ಕೊಟ್ಟಿದ್ದಾರೆ, ಈಗೇನಿದ್ದರೂ ಕಾನೂನಿನ ಹೋರಾಟ ಮಾತ್ರ ಉಳಿದಿದೆ. ಈ ಕುರಿತು ಕ್ಯಾಬಿನೆಟ್ ಸಭೆ ಕರೆದು ನಮ್ಮೆಲ್ಲರ ಅಭಿಪ್ರಾಯವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕೇಳಿಲ್ಲ. ರಾಜ್ಯಪಾಲರು ಯಾರ ಮಾತು ಕೇಳಿ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ನಾವು ಹೇಳಲು ಆಗುವುದಿಲ್ಲ. ಸಭೆಯಲ್ಲಿ ಕಾನೂನು ಹೋರಾಟ ಮಾಡಲು ನಿರ್ಣಯ ಮಾಡಲಾಗಿದೆ. ಬಿಜೆಪಿಯವರು ಮುಡಾ ಹಗರಣ ಕುರಿತು ಪಾದಯಾತ್ರೆ ಮಾಡಿದ್ದಾರೆ, ನಾವು ಪ್ರತಿಭಟನೆ ಮಾಡಬಾರದಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪರ ಇದ್ದೇವೆ:ರಾಜ್ಯಪಾಲರು ಸಂವಿಧಾನ ಹುದ್ದೆಯಲ್ಲಿರುವವರು. ಇದು ಸೂಕ್ಷ್ಮವಾದ ವಿಚಾರ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹಗರಣವಾಗಿದೆ. ಆವಾಗಲೇ ಈ ಕುರಿತು ತನಿಖೆಯಾಗಬೇಕಿತ್ತು. ಆದರೆ, ಆಗ ಏಕೆ ಆಗಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ಬಹುತೇಕ ವಿರೋಧ ಪಕ್ಷದಲ್ಲಿರುವಲ್ಲೆಲ್ಲ ಇಂತಹ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಇಡೀ ಪಕ್ಷ, ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಿದೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿರುವ ವಿಚಾರಕ್ಕೆ ಉತ್ತರಿಸಿದ ಪಾಟೀಲ, ಹೈಕಮಾಂಡ್ ಬಗ್ಗೆ ನಾವು ಮಾತನಾಡಲು ಅವಕಾಶವಿಲ್ಲ. ಬೇರೆ ಬೇರೆ ವಿಷಯಗಳಿಗೆ ಆಗಾಗ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ದೆಹಲಿಗೆ ಹೋಗುವುದು ಸಾಮಾನ್ಯ ಎಂದರು.ಮುಖ್ಯಮಂತ್ರಿ ರಾಜೀನಾಮೆಯಿಂದ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ ಎಂಬ ವಿಚಾರಕ್ಕೆ ಉತ್ತರಿಸಿ, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಈ ವಿಷಯ ಕುರಿತು ಸಂಸದ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಅವರು ನಮ್ಮ ಪಕ್ಷದವರಾ? ಯಾರ‍್ಯಾರೋ ಏನೇನೋ ಹೇಳುತ್ತಾರೆ. ನಮ್ಮ ಪಕ್ಷದವರು ಹೇಳಿದರೆ ಉತ್ತರ ನೀಡಬಹುದು. ಈ ಪ್ರಕರಣವನ್ನು ರಾಜಕೀಯ ವಿಚಾರವನ್ನಾಗಿಸಿಕೊಂಡಿರುವುದು ದುರಾದೃಷ್ಟಕರ ಎಂದರು.
ಇದೇ ರೀತಿಯಾಗಿ ಬಿಜೆಪಿಯವರು ಹಲವು ಸರ್ಕಾರಗಳನ್ನು ಕಿತ್ತುಹಾಕಿದ್ದಾರೆ. ಬಿಜೆಪಿಯವರಿಗೆ ಇದೊಂದು ಉದ್ಯೋಗವಾಗಿದೆ. ರಾಜ್ಯದ ಜನತೆ ಕಾಂಗ್ರೆಸ್ ಜತೆ ಇರುವ ವರೆಗೂ ಇದೆಲ್ಲ ಸಾಧ್ಯವಾಗುವುದಿಲ್ಲ ಎಂದರು.