ತಾಲೂಕಿನ ಗಡಿ ಭಾಗದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕಣಿವೆ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಕ ಕಣಿವೆ ವಿನಯ್ ತಮ್ಮ ಅಡಕೆ ತೋಟದ ನಡುವೆ ತಮ್ಮ ಮನೆಯಲ್ಲಿ ಕನ್ನಡದ ಕಂಪು ಪಸರಿಸಿ ಗಮನ ಸೆಳೆದಿದ್ದಾರೆ.

ಕಣಿವೆ ವಿನಯ್‌ ಮನೆಯ ಗೋಡೆಗಳ ಮೇಲೆ ಸುಂದರ ನುಡಿ ಮುತ್ತುಗಳು । 21 ಕನ್ನಡ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ । ಮನೆಯಂಗಳದಲ್ಲಿ ಕನ್ನಡ ಪುಸ್ತಕ ಬಿಡುಗಡೆ ।ಮನೆಯಲ್ಲಿ 2 ಸಾವಿರ ಪುಸ್ತಕಗಳ ಗ್ರಂಥಾಲಯ

ಯಡಗೆರೆ ಮಂಜುನಾಥ್,

ನರಸಿಂಹರಾಜಪುರ: ತಾಲೂಕಿನ ಗಡಿ ಭಾಗದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕಣಿವೆ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಕ ಕಣಿವೆ ವಿನಯ್ ತಮ್ಮ ಅಡಕೆ ತೋಟದ ನಡುವೆ ತಮ್ಮ ಮನೆಯಲ್ಲಿ ಕನ್ನಡದ ಕಂಪು ಪಸರಿಸಿ ಗಮನ ಸೆಳೆದಿದ್ದಾರೆ.

ಕಣಿವೆ ಎಂಬ ಗ್ರಾಮದಲ್ಲಿ ಕೃಷಿಕ ಕಣಿವೆ ವಿನಯ್ ನಾಗಚಂದ್ರ ಪ್ರತಿಷ್ಠಾನ ಸ್ಥಾಪನೆ ಮಾಡಿ ತಮ್ಮ ತೋಟದ ಮನೆಯ ಕಾಂಪೌಂಡಿನಲ್ಲಿ ಮೇರು ಸಾಹಿತಿ ಕುವೆಂಪು ಹಾಗೂ ಇತರ ಸಾಹಿತಿಗಳ ನುಡಿ ಮುತ್ತು, ಜೀವನದ ಮೌಲ್ಯಗಳನ್ನು ಸಾರುವ ಸುಂದರ ಕನ್ನಡದ ನುಡಿಗಳನ್ನು ಬರೆಸಿದ್ದಾರೆ.

ಕಾಂಪೌಂಡಿನ ಉದ್ದಕ್ಕೂ 40 ಕಡೆ ಕನ್ನಡದ ನುಡಿ ಮುತ್ತುಗಳಿವೆ. ಕನ್ನಡ ಶಾಲೆಗಳು ಉಳಿಯಬೇಕು ಎಂಬ ಉದ್ದೇಶದಿಂದ ತಾಲೂಕಿನಾದ್ಯಂತ 21 ಸರ್ಕಾರಿ ಶಾಲೆಗಳಿಗೆ ತಲಾ ₹60 ಸಾವಿರ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ನೀಡಿದ್ದಾರೆ. ಅಲ್ಲದೆ 8 ಸರ್ಕಾರಿ ಶಾಲೆಗೆ ₹20 ಸಾವಿರ ವೆಚ್ಚದ ಪ್ರಿಂಟರ್ ನೀಡಿದ್ದಾರೆ.4 ಶಾಲೆಗಳಿಗೆ ಸ್ಯಾನಿಟರ್ ಪ್ಯಾಡ್ ಬರ್ನರ್ ನೀಡಿದ್ದಾರೆ.

2019 ರಲ್ಲಿ ತಮ್ಮ ಮನೆ ಅಂಗಳದಲ್ಲಿ ತಾವೇ ಹಣ ಹಾಕಿ ಪ್ರಕಾಶನ ಮಾಡಿದ ಸರ್ಕಾರಿ ಶಾಲೆ ಮಕ್ಕಳೇ ಬರೆದ ಪುಟ್ಟ ಹೆಜ್ಜೆ, 2021 ರಲ್ಲಿ ಶಿಕ್ಷಕರಿಂದ ಲೇಖನ ಬರೆಸಿದ ದಿಟ್ಟ ಹೆಜ್ಜೆ ಹಾಗೂ 2023 ರಲ್ಲಿ ಕಾಡಿನ ನೆಂಟರು, 6 ಹೆಜ್ಜೆಗಳು ಎಂಬ ಕಥಾ ಸಂಕಲ ಬಿಡುಗಡೆ ಮಾಡಿಸಿದ್ದಾರೆ. ತಮ್ಮ ಮನೆಯಲ್ಲಿ ಕನ್ನಡ ಪುಸ್ತಕಗಳ ಗ್ರಂಥಾಲಯ ಹೊಂದಿದ್ದು ಅಂದಾಜು 2 ಸಾವಿರ ಕನ್ನಡ ಲೇಖಕರ ಪುಸ್ತಕಗಳಿವೆ. ಗ್ರಾಮಸ್ಥರಿಗೆ ಪುಸ್ತಕ ಓದಲು ನೀಡಿ ಓದುವ ಅಭಿರುಚಿ ಬೆಳೆಸಿದ್ದಾರೆ.

-- ಬಾಕ್ಸ್---

ಕಣಿವೆ ವಿನಯ್ ಕುವೆಂಪು ಅವರ 3 ಸಾವಿರ ಪೋಟೋ ಮಾಡಿಸಿ ಸರ್ಕಾರಿ ಶಾಲೆಗಳಿಗೆ, ಕಾರ್ಯ ಕ್ರಮಗಳ ಅತಿಥಿಗಳಿಗೆ ಹಾಗೂ ಮನೆಗೆ ಬಂದ ನೆಂಟರಿಗೆ ನೀಡಿ ಜನರಲ್ಲಿ ಸಾಹಿತ್ಯ ಅಭಿಮಾನ ಬೆಳೆಯಲು ಕಾರಣ ರಾಗಿದ್ದಾರೆ.ತಮ್ಮ ಮನೆಯ ಅಂಗಳದಲ್ಲಿ ರಂಗ ಮಂದಿರ ಕಟ್ಟುತ್ತಿದ್ದು ಮುಂದೆ ಪ್ರತಿ ವರ್ಷ ರಂಗಾಯಣ ಕಲಾವಿದರು, ಮುಖ್ಯ ಮಂತ್ರಿ ಚಂದ್ರು ತಂಡದವರಿಂದ 3 ದಿನಗಳ ಕಾಲ ನಾಟಕ ಏರ್ಪಡಿಸಲು ತೀರ್ಮಾನಿಸಿದ್ದಾರೆ.

-- ಕೋಟ್ ---

ನನ್ನ ತಂದೆ ನಾಗರಾಜ್ ಅವರು ಶಿಕ್ಷಕರು ಹಾಗೂ ಕಲಾವಿದರಾಗಿದ್ದರಿಂದ ನನಗೆ ಚಿಕ್ಕಂದಿನಿಂದಲೂ ಕನ್ನಡ ಮೇಲೆ ಪ್ರೀತಿ,ಅಭಿಮಾನ ಬಂದಿದೆ.ನಾನು ಸಹ ಕಲಾವಿದನಾಗಿದ್ದೇನೆ. ಟಿ.ವಿ.ಧಾರವಾಹಿ ಶಾಂತಂ ಪಾಪಂನಲ್ಲಿ ನಟಿಸಿದ್ದೇನೆ.ಪಾಠ ಶಾಲೆ, ಓಮಿನಿ ಸೇರಿ 7 ಸಿನಿಮದಲ್ಲಿ ನಟಿಸಿದ್ದೇನೆ. ಅಲ್ಲದೆ ತಿಮ್ಮನ ಮೊಟ್ಟೆ, ಎಂಥ ಕಥೆ ಮಾರಾಯ ಹಾಗೂ ಹೊಂಬಣ್ಣ ಸಿನಿಮದ ನಿರ್ಮಾಪಕನಾಗಿದ್ದೇನೆ.

ಕಣಿವೆ ವಿನಯ್, ಅಧ್ಯಕ್ಷ, ನಾಗಚಂದ್ರ ಪ್ರತಿಷ್ಠಾನ, ಕಣಿವೆ ಗ್ರಾಮ, ನರಸಿಂಹರಾಜಪುರ