ಬಿಇಎಲ್ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಿದ ಟ್ರಾಮಾ ಸೆಂಟರ್ ಉದ್ಘಾಟನೆಕನ್ನಡಪ್ರಭ ವಾರ್ತೆ ಕುಮಟಾ
ರಾಜ್ಯದಲ್ಲೇ ಮಾದರಿ ಟ್ರಾಮಾ ಸೆಂಟರ್ ಆಗಿ ಕುಮಟಾದ ಟ್ರಾಮಾ ಸೆಂಟರ್‌ನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ಅನುದಾನ ನೀಡಲಾಗುವುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.ತಾಲೂಕಾಸ್ಪತ್ರೆ ಆವಾರದಲ್ಲಿ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಿಎಸ್‌ಆರ್ ನಿಧಿಯಿಂದ ₹೨.೭೪ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಟ್ರಾಮಾ ಸೆಂಟರ್‌ನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ತಾಲೂಕಾಸ್ಪತ್ರೆಗೂ ನಿಗದಿತ ವೈದ್ಯರು, ಶುಶ್ರೂಷಕಿಯರು, ಎಲ್ಲ ಬಗೆಯ ಸಿಬ್ಬಂದಿ ನೇಮಕಗೊಳಿಸಲಾಗುವುದು. ಹೆಸರಾಂತ ಆಸ್ಪತ್ರೆಯವರಿಂದ ಈ ಟ್ರಾಮಾ ಸೆಂಟರ್ ದತ್ತು ಪಡೆದು, ಉತ್ತಮ ರೀತಿಯಲ್ಲಿ ನಿರ್ವಹಿಸುವ ಬಗ್ಗೆಯೂ ವಿಚಾರಿಸಲಾಗುವುದು.ಹಿಂದೆ ಆರೋಗ್ಯ ಕವಚ ಯೋಜನೆಯಂತೆ ಕರೆಮಾಡಿದ ೧೫ ನಿಮಿಷದಲ್ಲಿ ಆ್ಯಂಬುಲೆನ್ಸ್ ಬರುವ ವ್ಯವಸ್ಥೆ ಮಾಡುತ್ತೇವೆ. ತಪ್ಪಿದರೆ ಆ್ಯಂಬುಲೆನ್ಸ್‌ನವರಿಗೆ ₹೫ ಸಾವಿರದ ವರೆಗೆ ದಂಡ ವಿಧಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅಪಘಾತಕ್ಕೆ ಒಳಗಾದವರಿಗೆ ೭ ದಿವಸಗಳವರೆಗೆ ₹೨.೫ ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಜಾರಿಗೆ ತರಲಿದ್ದೇವೆ. ಸರ್ಕಾರಿ ಟ್ರಾಮಾ ಸೆಂಟರ್‌ಗೂ ಈ ಹಣ ನೀಡಲಿದ್ದು, ಅದರಲ್ಲಿ ಶೇ.೭೦ ಆಸ್ಪತ್ರೆಗೆ, ಶೇ. ೩೦ ವೈದ್ಯರು ಮತ್ತು ಸಿಬ್ಬಂದಿಗೆ ಇನ್ಸೆಂಟಿವ್ ನೀಡಲು ಬಳಸಲಾಗುತ್ತದೆ ಎಂದರು.
ಆಹಾರ ಸುರಕ್ಷತೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಜಂಕ್‌ಪುಡ್‌ಗಳು ಮತ್ತು ಸಿದ್ಧ ಆಹಾರಗಳ ಗುಣಮಟ್ಟ ತಪಾಸಣೆಗೆ ಈಗಿರುವ ಲ್ಯಾಬ್ ಉನ್ನತೀಕರಿಸುವ ಜತೆಗೆ ರಾಷ್ಟ್ರೀಯ ಮಟ್ಟದ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಬಾಣಂತಿಗೆ ಸೂಕ್ತ ಮಾರ್ಗದರ್ಶನ, ಕೈಪಿಡಿ ಮೂಲಕ ಮಗುವಿನ ಸಮರ್ಪಕ ಆಹಾರ ದಿಕ್ಸೂಚಿ ನೀಡಲಾಗುವುದು. ಈ ಮೂಲಕ ಮುಂದಿನ ೧೫ ವರ್ಷಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಿಸುವ ಚಿಂತನೆ ಇದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಕುಮಟಾದಲ್ಲಿ ಟ್ರಾಮಾ ಸೆಂಟರ್ ಮಾಡಲು ಅಗತ್ಯವಿರುವ ₹೨.೭೩ ಕೋಟಿ ನೀಡಿ ಜಿಲ್ಲೆಯ ಬಹುಕಾಲದ ಬೇಡಿಕೆ ಈಡೇರಲು ಕಾರಣರಾದ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ಜಿಲ್ಲೆಯ ಜನರ ಕೃತಜ್ಞತೆ ಸಲ್ಲುತ್ತದೆ. ಇದಲ್ಲದೇ ತಾಲೂಕಾಸ್ಪತ್ರೆಗೆ ಪೋಸ್ಟ್ಮಾರ್ಟಂ ರೂಮ್, ಫ್ರೀಜರ್ ಮತ್ತಿತರ ಉದ್ದೇಶಕ್ಕೆ ₹೫೦ ಲಕ್ಷ ನೀಡಲು ಈಗಾಗಲೇ ಭಾರತ್ ಎಲೆಕ್ಟ್ರಾನಿಕ್ಸ್ ಲಿ.ನವರು ಒಪ್ಪಿದ್ದಾರೆ ಎಂದರು.
ಬಿಇಎಲ್ ನಿರ್ದೇಶಕ ರಜನೀಶ ಶರ್ಮಾ ಮಾತನಾಡಿ, ಬಿಇಎಲ್ ಯಾವತ್ತೂ ಸಮಾಜದೆಡೆಗೆ ತನ್ನ ಕಾಳಜಿಯನ್ನು ಪ್ರತಿಪಾದಿಸುತ್ತಾ ಬಂದಿದ್ದು ಕುಮಟಾದ ಟ್ರಾಮಾ ಸೆಂಟರ್ ನಮ್ಮ ಸಾಮಾಜಿಕ ಬದ್ಧತೆಯ ಸಂಕೇತವಾಗಿದೆ. ಇಲ್ಲಿ ಕೋಲ್ಡ್ ಸ್ಟೋರೇಜ್ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ಟಿ.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಟ್ರಾಮಾಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆ ಉಪಕ್ರಮಗಳನ್ನು ಆರಂಭಿಸಲು ತುರ್ತಾಗಿ ಸುಮಾರು ₹೬ ಲಕ್ಷ ರೂಗಳ ಉಪಕರಣಗಳ ಅವಶ್ಯಕತೆ ಇದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಫಿಸಿಯೋಥೆರಪಿ, ರಿಹೆಬಿಲಿಟೇಷನ್ ಹಾಗೂ ಮೇಜರ್ ಆರ್ಥೊಪಿಡಿಕ್ ಉಪಕರಣಗಳಿಗೆ, ಕನಿಷ್ಠ ೬ ಮಂದಿಯಾದರೂ ಸ್ಟಾಫ್ ಬೇಕು. ಇದಕ್ಕೆಲ್ಲಾ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಿಎ ವಿನಾಯಕ ಹೆಗಡೆ, ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಭಾರತ ಇಲೆಕ್ಟ್ರಾನಿಕ್ಸ ಲಿಮಿಟೆಡ್‌ನ ಜಿಎಂ ಸಂಜಯ ಅಗರ್ವಾಲ, ಟಿ.ಎನ್. ಸಿಂಗ್, ಡಿ.ಜಿಎಂ. ಡಾ. ಶಶಿಭೂಷಣ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಶ ಶಶಿ, ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಆರೋಗ್ಯ ಇಲಾಖೆಯ ಬೆಳಗಾವಿ ವಿಭಾಗೀಯ ಸಹನಿರ್ದೇಶಕಿ ಡಾ. ಪುಷ್ಪಾ ಎಚ್.ಆರ್., ಎನ್‌ಎಚ್‌ಎಂ ಡಿಡಿ ಅಕ್ರಂ ಪಾಷಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ ದೊಡ್ಮನಿ, ರೋಟರಿ ಅಧ್ಯಕ್ಷ ಸಿಎ ವಿನಾಯಕ ಹೆಗಡೆ, ಉದ್ಯಮಿ ಮುರಳೀಧರ ಪ್ರಭು ಇದ್ದರು.ಕಾರ್ಯಕ್ರಮದಲ್ಲಿ ದಾನಿಗಳಾದ ರಾಮನಾಥ ಶಾನಭಾಗ, ರೋಟರಿ ವತಿಯಿಂದ ಅಧ್ಯಕ್ಷ ವಿನಾಯಕ ಹೆಗಡೆ ಇತರರನ್ನು ಸನ್ಮಾನಿಸಲಾಯಿತು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ನಾಗಶ್ರೀ ಕೆ.ಆರ್. ಪ್ರಾರ್ಥಿಸಿದರು. ರವೀಂದ್ರ ಭಟ್ ಸೂರಿ ನಿರೂಪಿಸಿದರು. ಡಾ. ಲಕ್ಷ್ಮೀಶ ನಾಯ್ಕ, ಡಾ. ಶಿವಾನಂದ ಹೆಗಡೆ, ಡಾ. ಗಿರೀಶ ನಾಯ್ಕ, ಡಾ. ಸದಾನಂದ ಪೈ, ಡಾ. ನಾಗರತ್ನಾ ಪಟಗಾರ, ಡಾ. ಈಶ್ವರ ಎಂ., ಡಾ. ಗಜಾನನ ಭಾಗ್ವತ, ಡಾ. ನಮಿತಾ, ಡಾ. ಸತೀಶ, ಹರಿಣಿ ನಾಯ್ಕ ಇತರರಿದ್ದರು.