ಶಾಲಾ ಕೊಠಡಿಗಳಲ್ಲಿಯೇ ಭವ್ಯ ಭಾರತದ ಭವಿಷ್ಯ

| Published : Jan 11 2024, 01:30 AM IST

ಸಾರಾಂಶ

ಅಥಣಿ ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಅಥಣಿ

ಭವ್ಯ ಭಾರತದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ಅಡಗಿದೆ. ಶಾಲೆಗಳು ಕೇವಲ ಕಟ್ಟಡವಲ್ಲ, ಜ್ಞಾನ ದೇಗುಲ ಎನಿಸಿಕೊಳ್ಳುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹೇಳಿದರು.

ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗಬೇಕಾದರೇ ಗುರುವಿನ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಶ್ರದ್ಧೆ ಬಹಳ ಮುಖ್ಯ. ಸಾಧಿಸಬೇಕೆಂಬ ಛಲ ಮತ್ತು ಸತತ ಪ್ರಯತ್ನವಿದ್ದರೇ ಸಾಧನೆ ಸುಲಭ. ನಮ್ಮ ಹಣೆಬರಹವನ್ನು ನಮ್ಮ ಕೈ ರೇಖೆಗಳು, ಯಾವ ದೈವ ಶಕ್ತಿಗಳು ಬರೆಯಲ್ಲ. ನಮ್ಮ ಭವಿಷ್ಯವನ್ನು ನಾವೇ ಬರೆದುಕೊಳ್ಳಬೇಕು. ನಮ್ಮ ಸೋಲನ್ನು ನಾವು ಗೆಲ್ಲಬೇಕು. ನಾವು ಯಶಸ್ವಿಯ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನಿಲ ಶಿವಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಬಹಳ ಮುಖ್ಯ. ಮನೆಗೆ ಮೊದಲ ಪಾಠ ಶಾಲೆಯಾದರೆ ತಾಯಿಯೇ ಮೊದಲ ಗುರುವಾಗಿ ಮಾರ್ಗದರ್ಶನ ಮಾಡುತ್ತಾಳೆ. ಶಾಲೆಗಳಲ್ಲಿ ಗುರುಗಳು ಪಠ್ಯಪುಸ್ತಕದ ಜ್ಞಾನದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ಇಂದಿನ ಅಗತ್ಯವಾಗಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ನಮ್ಮ ಶಾಲೆಯ ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನ ಬಹಳ ಮುಖ್ಯವಾಗಿದೆ ಎಂದು ಶಿಕ್ಷಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯ ನಿರ್ದೇಶಕ ಪ್ರಕಾಶ ಮಹಾಜನ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಗಣೇಶ ಉತ್ಸವದ ಕಮಿಟಿಯಲ್ಲಿನ ಉಳಿತಾಯದ ಹಣದಿಂದ ಆರಂಭವಾದ ಈ ಶಾಲೆಯಲ್ಲಿ ಇಂದು 1800ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ನಮ್ಮ ಶಿಕ್ಷಕರ ಕಾರ್ಯ ಮೆಚ್ಚುವಂತಹದ್ದು. 10ನೇ ತರಗತಿಯ ವಾರ್ಷಿಕ ಪರೀಕ್ಷೆ, ವಿವಿಧ ಸ್ಪರ್ಧೆಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ನಮ್ಮ ಸಂಸ್ಥೆಯು ಬಡ ಹಾಗೂ ಮಾಧ್ಯಮ ಕುಟುಂಬದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ರ್‍ಯಾಂಕ್‌ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನ ರಂಜಿಸಿದವು.

ಈ ವೇಳೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಶೋಕ ಬುರ್ಲಿ, ಕಾರ್ಯದರ್ಶಿ ವಿಜಯಕುಮಾರ ಬುರ್ಲಿ, ಶಿವಶಂಕರ ಹಂಜಿ, ಶ್ರೀಶೈಲ ಸಂಕ, ಓಂಕಾರಪ್ಪ ಸಾವಡಕರ, ಮುಖ್ಯೋಪಾಧ್ಯಾಯ ಎಂ.ಎಸ್.ದೇಸಾಯಿ, ಪಿ.ಡಿ.ಚನಗೌಡರ, ಎಂ.ಬಿ.ಬಿರಾದಾರ, ಆಡಳಿತ ಅಧಿಕಾರಿಗಳಾದ ಪ್ರತಿಭಾ ನಾಯಕ, ಹನುಮಂತ ಗುಡೋಡಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು.ಸಂದೀಪ ಪೊದ್ದಾರ, ಕು.ನಮ್ರತಾ ಹಗಲಂಬಿ, ಕು.ವೀಕ್ಷಿತ್ ಶೆಟ್ಟಿ ಮತ್ತು ಕು.ಶ್ರದ್ಧಾ ಮಮದಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಶೋಕ ಬುರ್ಲಿ ಸ್ವಾಗತಿಸಿದರು. ಎಸ್.ಪಿ.ಪಿರಗೊಂಡ ಪರಿಚಯಿಸಿದರು. ಕು.ನಿತ್ಯಶ್ರೀ ಹಾಲಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿ.ವಿ.ಕವಟೇಕರ ವಂದಿಸಿದರು.

ಅಥಣಿ ವಿದ್ಯಾವರ್ಧಕ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತದ್ದು, ಆಡಳಿತ ಮಂಡಳಿಯ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಾಧಕ ವಿದ್ಯಾರ್ಥಿಗಳ ಸನ್ಮಾನ ಅವರಿಗೆ ಇನ್ನಷ್ಟು ಸಾಧಿಸಲು ಸ್ಫೂರ್ತಿ ತುಂಬುತ್ತದೆ.

-ಅಶೋಕ್ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ.