ಔರಾದ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

| Published : Aug 08 2024, 01:41 AM IST

ಸಾರಾಂಶ

ಔರಾದ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ನಿಗಿಸಬೇಕೆಂದು ಆಗ್ರಹಿಸಿ ಎಬಿವಿಪಿಯಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಔರಾದ್

ಉಪನ್ಯಾಸಕರ ಕೊರತೆಯಿಂದ ನಮ್ಮ ಬದುಕು ಹಾಳಾಗುತ್ತಿದೆ. ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಪಾಠ-ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಎಬಿವಿಪಿ ಕಾರ್ಯಕರ್ತರ ಜೊತೆಯಲ್ಲಿ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಬಳಿ ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿ ತಡೆದು ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಹಲವು ವರ್ಷಗಳಿಂದ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾಲೇಜಿನಲ್ಲಿ ಸರ್ಕಾರ ಒಬ್ಬರನ್ನು ಮಾತ್ರ ನೇಮಿಸಿದೆ. ಅವರು ಸದ್ಯ ಪ್ರಾಂಶುಪಾಲರ ಹುದ್ದೆ ನಿರ್ವಹಿಸುತ್ತಿದ್ದು, ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.

ವಾಹನಗಳ ಸುಗಮ ಸಂಚಾರಕ್ಕೆ ತಗ್ಗು ಮುಚ್ಚಬೇಕು, ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಸಮಸ್ಯೆ ಬಹೆಗರಿಯುತ್ತಿಲ್ಲ ಎಂದು ಪ್ರಾಂಶುಪಾಲ ಡಾ.ಸಂಜೀವಕುಮಾರ ಅಸಹಾಯಕತೆ ವ್ಯಕ್ತಪಡಿಸಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರಿಗೆ ಸಲ್ಲಿಸಿದರು.

ಪಿಎಸ್‌ಐ ವಾಸೀಮ್ ಪಟೇಲ್, ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾತಕಲೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ, ಅಶೋಕ ಶೆಂಬೆಳ್ಳಿ, ಸುರೇಶ ಮರ್ತುಳೆ, ಅನಿಲ ಮೇತ್ರೆ, ನೀತಿನ ಮೂಲಗೆ, ಪಲ್ಲವಿ, ಗೋಪಿ, ಆಶಾ, ಗೌತಮ, ಓಂಕಾರ ಸೇರಿದಂತೆ ಅನೇಕರಿದ್ದರು.