ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಸಹಕಾರ ಮತ್ತು ಮಕ್ಕಳ ಶ್ರಮದಿಂದಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶ ಬಂದಿದೆ ಎಂದರು.
ಮುಂಡರಗಿ: ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಮಕ್ಕಳ ಕೊರತೆಯಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬರುವುದಿಲ್ಲ ಎಂದು ಲಿಂ. ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಶಿಕ್ಷಣಪ್ರೇಮಿ ಆನಂದಗೌಡ ಪಾಟೀಲ ತಿಳಿಸಿದರು.
ಮುಂಡರಗಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಎಸ್. ಪಾಟೀಲ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಿದ ಕನ್ನಡ ಕವಿತೆಗಳ ವಾಚನ ಹಾಗೂ ಗೀತಗಾಯನ ಮಕ್ಕಳ ಎರಡು ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಸರ್ಕಾರದಿಂದ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬರುತ್ತದೆ. ಜತೆಗೆ ಆಯಾ ಗ್ರಾಮದಲ್ಲಿನ ಸಾರ್ವಜನಿಕರೂ ಸಹಕಾರ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಸಹಕಾರ ಮತ್ತು ಮಕ್ಕಳ ಶ್ರಮದಿಂದಾಗಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಗುಣಮಟ್ಟದ ಫಲಿತಾಂಶ ಬಂದಿದೆ. ಡಾ. ನಿಂಗು ಸೊಲಗಿ ಅವರು ಹೋದಲ್ಲೆಲ್ಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ದಾನಿಗಳ ಸಹಕಾರದಿಂದ ಶಾಲಾ ಅಭಿವೃದ್ಧಿ ಮಾಡುತ್ತಾ ಬಂದಿದ್ದಾರೆ. ಇದೀಗ ಬೇಸಿಗೆ ಶಿಬಿರ ಮಾಡುತ್ತಿದ್ದು, ಮಕ್ಕಳಲ್ಲಿರುವ ಸೃಜನಶೀಲತೆಗೆ ಇಂತಹ ಶಿಬಿರಗಳು ಇಂಬು ನೀಡುತ್ತವೆ ಎಂದರು.ಗ್ರಾಮದ ಮುಖಂಡ ಬಸವರಾಜ ತಿಗರಿ ಮಾತನಾಡಿ, ಆನಂದಗೌಡ ಪಾಟೀಲ ಪಕ್ಷಾತೀತ, ಜಾತ್ಯತೀತವಾಗಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುತ್ತಾ ಬಂದಿದ್ದು, ಕಳೆದ ಎರಡು ವರ್ಷಗಳಿಂದ ನಮ್ಮೂರಿನ ಶಾಲೆಗೆ ಲಕ್ಷಾಂತರ ರು. ದಾನ ನೀಡುವ ಮೂಲಕ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕಸಾಪದಿಂದ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಾ ಬರುತ್ತಿದ್ದು, ಇದರಿಂದ ಮಕ್ಕಳಲ್ಲಿ ಜ್ಞಾನ ವೃದ್ಧಿಯಾಗುವುದರ ಜತೆಗೆ ವ್ಯಕ್ತಿತ್ವ ವಿಕಸನಗೊಳಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.ಶಿಬಿರದ ನಿರ್ದೇಶಕ, ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಸರ್ಕಾರದ ಅನುದಾನದ ಜತೆಗೆ ಗ್ರಾಮದ ಸಾರ್ವಜನಿಕರ ಹಾಗೂ ದಾನಿಗಳ ದಾನದಿಂದ ಶಾಲಾ ಅಭಿವೃದ್ಧಿಗೊಳಿಸುತ್ತಾ ಬಂದಿದ್ದು, ಎಲ್ಲರ ಶ್ರಮದಿಂದಾಗಿ ರಾಮೇನಹಳ್ಳಿ ಶಾಲೆ ಮಕ್ಕಳ ಆಕರ್ಷಣೆಯ ಕೇಂದ್ರವಾಗಿ ಬೆಳೆದು ನಿಂತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ದಂಡೀನ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಹೂವಿನಹಡಗಲಿಯ ಶಿಕ್ಷಕರಾದ ದ್ವಾರಕೀಶರಡ್ಡಿ, ಹೊಳಗುಂದಿಯ ಆರ್.ಬಿ. ಗುರುಬಸವರಾಜ, ವಿಠಲ್ ಜಂಬಗಿ, ಮಹೇಶ ಬಾಗಳಿ, ಶರಣಪ್ಪ ದಂಡೀನ, ಕೊಟೆಪ್ಪ ಸುಣಗಾರ, ಸಹದೇವಪ್ಪ ಡಂಬಳ, ಜಯಶ್ರೀ ಅಳವಂಡಿ, ಶಂಕರ ಕುಕನೂರು, ಶಿವು ವಾಲಿಕಾರ, ಮಂಜುನಾಥ ಮುಧೋಳ, ಶಾಲಾ ಶಿಕ್ಷಕರಾದ ಬಿ.ಎಚ್. ಹಲವಾಗಲಿ, ಪಿ.ಆರ್. ಗಡಾದ, ಶಿವಲೀಲಾ ಅಬ್ಬಿಗೇರಿ, ಪಿ.ಎಂ. ಲಾಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಮೇಶಗೌಡ ಪಾಟೀಲ ನಿರೂಪಿಸಿದರು. ಎನ್.ಎನ್. ಕಲಕೇರಿ ವಂದಿಸಿದರು.