ಶೈಕ್ಷಣಿಕ ಗುಣಮಟ್ಟದ ಮೇಲೆ ದೇಶದ ಭವಿಷ್ಯ ರೂಪಿತ

| Published : Oct 10 2025, 01:00 AM IST

ಶೈಕ್ಷಣಿಕ ಗುಣಮಟ್ಟದ ಮೇಲೆ ದೇಶದ ಭವಿಷ್ಯ ರೂಪಿತ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ನಡೆದ ಕ್ರೀಡಾ ಸಾಂಸ್ಕೃತಿಕ ದಿನಾಚರಣೆಯಲ್ಲಿ ಪಟೇಲ್ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶೈಕ್ಷಣಿಕ ಗುಣಮಟ್ಟದ ಮೇಲೆ ಆಯಾ ದೇಶದ ಭವಿಷ್ಯ ರೂಪಿತವಾಗುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ರಾಷ್ಟ್ರದ ದ ಭವಿಷ್ಯ ಅಲ್ಲಿನ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ. ವಿದ್ಯಾಲಯಗಳು ಮಕ್ಕಳಲ್ಲಿ ಶಿಕ್ಷಣದ ಜತೆಜತೆಗೆ ಸನ್ನಡತೆ ಮತ್ತು ಸಂಸ್ಕೃತಿಯನ್ನು ತುಂಬಬೇಕಿದೆ ಎಂದರು.

ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಓದು, ನಿರಂತರ ಪ್ರಕ್ರಿಯೆ. ಓದುವ ಹವ್ಯಾಸವು ಗ್ರಂಥಾಧ್ಯಯನ ಆಗುತ್ತದೆ. ಅಧ್ಯಯನವು ಹವ್ಯಾಸ ಆಗಿ ಮುಂದೆ ಬಲವಾಗುತ್ತದೆ. ಅಧ್ಯಯನ ಬಲಕ್ಕೆ ಅನುಭವ ಬಲ ಕೂಡಿದರೆ, ಎಲ್ಲ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಧನಮದ, ಕುಲಮದ, ವಿದ್ಯಾಮದ, ರೂಪಮದ, ಯೌವನಮದ, ಬಲಮದ, ಪರಿವಾರಮದ, ಅಧಿಕಾರಮದ ಈ ಅಷ್ಟಮದಗಳನ್ನು ತ್ಯಜಿಸಿದರೆ ಮಾತ್ರ ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಗಟ್ಟಿ ಕಾಳು ಇರುವ ರಾಗಿಯ ತೆನೆಯ ರೀತಿ ಬಾಗಿಕೊಂಡು ವಿನಯವಂತಿಕೆಯಿಂದ ಬದುಕಬೇಕು. ಇಲ್ಲಿ ಪಡೆದುಕೊಳ್ಳುವ ಶಿಕ್ಷಣವನ್ನು ಕೇವಲ ಪರೀಕ್ಷೆಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಸ್ ಜೆಎಂ ಎನ್ನುವುದು ಕಾಲದ ಬ್ರಾಂಡ್ ಆಗಿದೆ. ಆದ್ದರಿಂದಲೇ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕರಲ್ಲಿ ಎಸ್ ಜೆಎಂ ಸಂಸ್ಥೆಗಳಲ್ಲಿ ಕಾಲೇಜಿನಲ್ಲಿ ಕಲಿತವರಿದ್ದಾರೆ ಎನ್ನವುದು ಹೆಮ್ಮೆಪಡುವಂಥದ್ದಾಗಿದೆ ಎಂದರು.

ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗೌರವ ಮನೋಭಾವನೆ ಬಹಳ ಮುಖ್ಯವಾಗುತ್ತದೆ. 18 ರಿಂದ 30 ರ ನಡುವಿನ ವಯಸ್ಸು ಬಹಳ ಪ್ರಮುಖವಾಗಿರುತ್ತದೆ. ಇದು ಜೀವನದಲ್ಲಿ ಸಾಧನೆಗಳನ್ನು ಮಾಡುವಂತಹ ವಯಸ್ಸಾಗಿರುತ್ತದೆ. ಆದ್ದರಿಂದ ಈ ಸಮಯವನ್ನು ವ್ಯರ್ಥವಾಗಿ ಕಳೆದುಕೊಳ್ಳದೆ ನಿಮ್ಮ ಸಾಧನೆಗೆ ಬಳಸಿಕೊಳ್ಳಿ. ನಿಮ್ಮ ಶ್ರೇಯಸ್ಸಿಗಾಗಿ ಸದಾ ಪರಿತಪಿಸುವ ತಂದೆ ತಾಯಿಗಳನ್ನು ದೇವರಿಗೆ ಸಮನಾದ ಗೌರವ ಪ್ರೀತಿಯನ್ನು ನೀಡುವುದರ ಜೊತೆಗೆ ಅವರು ನಿಮ್ಮ ಬಗೆಗೆ ಕಂಡ ಕನಸುಗಳನ್ನು ನನಸು ಮಾಡಿ ಎಂದು ಹೇಳಿದರು.

ಪಟೇಲ್ ಶಿವಕುಮಾರ್ ಮಾತನಾಡಿ, ಸಾವಿರಾರು ಜನರಿಗೆ ವಿದ್ಯಾರ್ಜನೆ ಮಾಡುವುದು ಒಂದು ಪುಣ್ಯ ಕಾರ್ಯವಾಗಿದೆ. ಅಂತಹ ಮಹತ್ವದ ಕಾರ್ಯವನ್ನು ಎಸ್ ಜೆಎಂ ವಿದ್ಯಾಸಂಸ್ಥೆ ಹಲವು ದಶಕಗಳಿಂದ ಮಾಡಿಕೊಂಡು ಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಕಳೆಯುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಕನಸು ಕಾಣುವಂತಹ ವಯಸ್ಸು ನಿಮ್ಮದಾಗಿರುವುದರಿಂದ ಉತ್ತಮವಾದ ಕನಸುಗಳನ್ನು ಕಂಡು ಅವುಗಳನ್ನು ಸಾಕಾರಗೊಳಿಸಿಕೊಳ್ಳಿ. ಕಳೆದು ಹೋದ ಸಮಯ ಮತ್ತೆ ಹಿಂತಿರುಗುವುದಿಲ್ಲ ಆದ್ದರಿಂದ ಇರುವ ಕಡಿಮೆ ಸಮಯದಲ್ಲಿ ಸಾಧನೆಗಳನ್ನು ಮಾಡಬೇಕಾಗುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ಎಂ ವೀರೇಶ್ ಮಾತನಾಡಿ ವಿದ್ಯಾರ್ಥಿಗಳು ಮನಸ್ಸುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬ ಆಲೋಚನೆಯಲ್ಲಿ ತೊಡಗಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿಕೊಳ್ಳುವುದರ ಜೊತೆಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಪ್ರಾಧ್ಯಾಪಕರುಗಳಾದ ಪ್ರೊ.ಬಿ.ಎಂ ಸ್ವಾಮಿ, ಪ್ರೊ.ಮಂಜುನಾಥಸ್ವಾಮಿ, ಪ್ರೊ.ವೆಂಕಟೇಶ್, ಪ್ರೊ. ಬಿ.ನಾಗರಾಜ, ಡಾ.ಸತೀಶ್ ನಾಯ್ಕ್, ಡಾ.ರಮೇಶ್ ಸಿ.ಮೋಹನ್, ವಿನಯ್, ವೀರಣ್ಣ, ಹೀನಾ ಕೌಸರ್, ನಮನ, ಶಾಲಿನಿ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಪ್ರಾಂಶುಪಾಲರಾದ ಡಾ.ಎಸ್.ಹೆಚ್. ಪಂಚಾಕ್ಷರಿ ಸ್ವಾಗತಿಸಿದರು. ಡಾ.ಎಸ್.ಆನಂದ್ ವಂದಿಸಿದರು. ಡಾ.ಬಿ ರೇವಣ್ಣ ನಿರೂಪಿಸಿದರು.