10ಕೆಆರ್ ಎಂಎನ್ 4.ಜೆಪಿಜಿಚನ್ನಮಾನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಘಟನೆ ನಡೆದಾಗ ಜನ ಸೇರಿರುವುದು | Kannada Prabha
Image Credit: KP
ರಾಮನಗರ: ದೇವಸ್ಥಾನದ ಆವರಣದಲ್ಲಿದ್ದ ನಲ್ಲಿಯಲ್ಲಿ ನೀರು ಹಿಡಿಯಲು ಹೋದ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಬಳಿಯಿದ್ದ ಕೊಡವನ್ನು ಪೂಜಾರಿ ಮತ್ತು ಆತನ ಸಹೋದರಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದ ಹೊರ ವಲಯದ ಚನ್ನಮಾನಹಳ್ಳಿಯಲ್ಲಿ ನಡೆದಿದೆ.
ರಾಮನಗರ: ದೇವಸ್ಥಾನದ ಆವರಣದಲ್ಲಿದ್ದ ನಲ್ಲಿಯಲ್ಲಿ ನೀರು ಹಿಡಿಯಲು ಹೋದ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಬಳಿಯಿದ್ದ ಕೊಡವನ್ನು ಪೂಜಾರಿ ಮತ್ತು ಆತನ ಸಹೋದರಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದ ಹೊರ ವಲಯದ ಚನ್ನಮಾನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಬೈರಲಿಂಗಯ್ಯ ಮತ್ತು ಕವಿತಾ ಪುತ್ರಿ ಬಿ.ಭುವನ ನಿಂದನೆಗೆ ಒಳಗಾದ ಬಾಲಕಿ. ಅದೇ ಗ್ರಾಮದ ಕುಮಾರ್ ಮತ್ತು ಆತನ ಸಹೋದರಿ ಯಶೋಧ ಕೃತ್ಯ ಎಸಗಿದವರು. ಇಬ್ಬರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ 1989 ರ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆ ಮತ್ತು 323, 324, 504, 506 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಲಾಗಿದೆ. ಘಟನೆ ವಿವರ: ಪರಿಶಿಷ್ಟ ಜಾತಿಗೆ ಸೇರಿದ 13 ವರ್ಷದ ಬಾಲಕಿ ಕುಡಿಯುವ ನೀರು ತರಲು ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ಹೋಗಿದ್ದಾಳೆ. ಆಗ ದೇಗುಲದ ಪೂಜಾರಿ ಕುಮಾರ್ ಮತ್ತು ಆತನ ಸಹೋದರಿ ಯಶೋಧ ನೀರು ಹಿಡಿಯಲು ಬಾಲಕಿಗೆ ಅಡ್ಡಿ ಪಡಿಸಿದ್ದಾರೆ. ನೀವು ಇಲ್ಲಿಗೆ ನೀರು ಹಿಡಿಯಲು ಏಕೆ ಬರುತ್ತೀರಿ. ನೀವು ಹೊಲಗೆರಿಯವರು, ಸುಮ್ಮನೆ ಇಲ್ಲಿಗೆ ನೀರು ಹಿಡಿಯಲು ಬಂದು ನಮ್ಮನ್ನು ಮತ್ತು ದೇವಸ್ಥಾನವನ್ನು ಮೈಲಿಗೆ ಮಾಡುತ್ತಿರೆಂದು ಬಾಲಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಆಕೆ ನೀರಿಗಾಗಿ ತಂದಿದ್ದ ಕೊಡವನ್ನು ಎಸೆದು ಕಳುಹಿಸಿದ್ದಾರೆ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದಾಳೆ. ಆಕೆಯ ಚಿಕ್ಕಪ್ಪ ಪ್ರಸನ್ನ ಕುಮಾರ್ ಕೇಳಲು ಹೋದಾಗ ದೇವಸ್ಥಾನದ ಬಳಿಗೆ ಏಕೆ ಬರುತ್ತೀರಾ, ಮೈಲಿಗೆ ಆಗುತ್ತದೆ ಎಂದೆಲ್ಲ ಜಾತಿ ನಿಂದನೆ ಮಾಡಿದ್ದಾರೆ. ಇದೇ ಸಮಯಕ್ಕೆ ಅಲ್ಲಿಗೆ ಬಂದ ಪ್ರಸನ್ನ ಕುಮಾರ್ ಸ್ನೇಹಿತ ಜಯಕುಮಾರ್ ನೀವು ಮಾತನಾಡುತ್ತಿರುವುದು ಸರಿ ಇಲ್ಲವೆಂದು ಹೇಳಿದ್ದಾರೆ. ಅವರನ್ನು ನಿಂದಿಸಿದ ಕುಮಾರ್ ಮತ್ತು ಮತ್ತು ಆತನ ಸಹೋದರಿ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ಕಪಾಳ ಮೋಕ್ಷ ಮಾಡಿದ್ದಲ್ಲದೆ ಕಲ್ಲಿನಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಗ್ರಾಮದ ಸುಶೀಲಮ್ಮ, ಶಿವಮ್ಮ, ಪ್ರವೀಣ್ ಕುಮಾರ್ ಮತ್ತು ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳು ಜಯಕುಮಾರ್ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಬಾಲಕಿಯ ಚಿಕ್ಕಪ್ಪ ಪ್ರಸನ್ನ ಕುಮಾರ್ ನೀಡಿದ ದೂರಿನ ಮೇರೆಗೆ ಐಜೂರು ಠಾಣೆ ಪೊಲೀಸರು ಪೂಜಾರಿ ಕುಮಾರ್ ಮತ್ತು ಆತನ ಸಹೋದರಿ ಯಶೋಧ ವಿರುದ್ಧ 1989 ರ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆ ಮತ್ತು 323, 324, 504,506 ಜೊತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಬಳಿಕ ಆರೋಪಿ ಕುಮಾರ್ ತಲೆ ಮರೆಸಿಕೊಂಡಿದ್ದು, ಮತ್ತೊಬ್ಬ ಆರೋಪಿ ಯಶೋಧರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. 10ಕೆಆರ್ ಎಂಎನ್ 4.ಜೆಪಿಜಿ ಚನ್ನಮಾನಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಘಟನೆ ನಡೆದಾಗ ಜನ ಸೇರಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.