ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ- ಸಂಭ್ರಮದ ಷಷ್ಠಿ ಬ್ರಹ್ಮರಥೋತ್ಸವ ಬುಧವಾರ ವೈಭವದಿಂದ ನೆರವೇರಿತು.

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನಾ ಕ್ಷೇತ್ರವಾದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ- ಸಂಭ್ರಮದ ಷಷ್ಠಿ ಬ್ರಹ್ಮರಥೋತ್ಸವ ಬುಧವಾರ ವೈಭವದಿಂದ ನೆರವೇರಿತು.ಮುಂಜಾನೆ ಅನ್ನ ಛತ್ರದಲ್ಲಿ ಕೊಪ್ಪರಿಗೆ ಮಹೂರ್ತ ಪ್ರಾರ್ಥನೆ ನಡೆದು, ಬಳಿಕ ಶ್ರೀ ಅನಂತಪದ್ಮನಾಭ ದೇವರಿಗೆ ಉಷಾ ಕಾಲದ ಪೂಜೆ, ವಿವಿಧ ಸೇವೆಗಳು ನಡೆದ ಬಳಿಕ ವಿಶೇಷ ಹರಿವಾಣ ನೈವೇದ್ಯ ಸಮರ್ಪಣೆಗೊಂಡಿತು. ಷಷ್ಟಿ ಉತ್ಸವದ ವಿಶೇಷ ಮಹಾ ನೈವೇದ್ಯ ಅರ್ಪಣೆಗೊಂಡ ಬಳಿಕ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಷಷ್ಟಿಯ ಮಧ್ಯಾಹ್ನದ ಮಹಾಪೂಜೆ ವೈಭವದಿಂದ ನಡೆಯಿತು.

ಬಳಿಕ ಪಲ್ಲಪೂಜೆ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ವಾದ್ಯ ಸೇವೆಗಳು ನಡೆದ ಬಳಿಕ ರಾಜಬೀದಿಯಲ್ಲಿರುವ ಬ್ರಹ್ಮರಥದ ಬಳಿ ಭಕ್ತರು “ಗೋವಿಂದ” ನಾಮಸ್ಮರಣೆಯ ಘೋಷದೊಂದಿಗೆ ಶ್ರೀ ಅನಂತ ಪದ್ಮನಾಭ ದೇವರ ವೈಭವದ ಬ್ರಹ್ಮ ರಥಾರೋಹಣ ಕಾರ್ಯಕ್ರಮ ನಡೆಯಿತು. ಭಕ್ತರಿಂದ ಬ್ರಹ್ಮರಥಕ್ಕೆ ತೆಂಗಿನಕಾಯಿ ಒಡೆಯುವ ಸೇವೆ ನಡೆದು, ಬ್ರಹ್ಮರಥದಲ್ಲಿ ದೇವರಿಗೆ ವಿಶೇಷ ಮಹಾಪೂಜೆ ನಡೆಯಿತು. ನಂತರ ಬ್ರಹ್ಮರಥವು ರಾಜಬೀದಿಯಲ್ಲಿ ಸಾಗುತ್ತಿದ್ದಾಗ ಭಕ್ತರ “ಗೋವಿಂದ” ನಾಮಸ್ಮರಣೆ ಮುಗಿಲು ಮುಟ್ಟಿತು. ಬಳಿಕ ಮಹಾ ಅನ್ನಸಂಪರ್ಪಣೆಯ ಕಾರ್ಯಕ್ರಮ ನಡೆಯಿತು.

ಸಹಸ್ರಾರು ಮಂದಿ ಭಾಗಿ: ಮಹಾ ಅನ್ನಸಂತರ್ಪಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಭಕ್ತರಿಂದ 22 ಸಾವಿರ ತಂಬಿಲ, 600 ಪಂಚಾಮೃತ ಅಭಿಷೇಕ 30 ಸಾವಿರ ಸೀಯಾಳ ಅರ್ಪಣೆಗೊಂಡಿತು.

ಕ್ಷೇತ್ರದ ಅನುವಂಶಿಕ ಆಡಳಿತ ಮುಕ್ತೇಸರ ಹಾಗೂ ಅನುವಂಶಿಕ ಮುಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮುಕ್ತೇಸರ ಹಾಗೂ ಅನುವಂಶಿಕ ಅರ್ಚಕ ಕೆ. ಮನೋಹರ ಭಟ್, ಅನುವಂಶಿಕ ಮುಕ್ತೇಸರ ಹಾಗೂ ಅನುವಂಶಿಕ ಪವಿತ್ರ ಪಾಣಿ ಕೆ. ಬಾಲಕೃಷ್ಣ ಕಾರಂತ, ಮುಕ್ತೇಸರ ಭಾಸ್ಕರ ಕೆ., ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಇದ್ದರು.