ಜರ್ಮನಿಯ ಫ್ರಾಂಕ್ ಫರ್ಟ್‌ನಲ್ಲಿ ನಡೆಯಲಿರುವ ಜಾನಪದ ವೈಭವ-2026 ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಹಳಿಯಾಳದ ಸೂತ್ರದ ಗೊಂಬೆಗಳು ಪಾಲ್ಗೊಳ್ಳಲಿದ್ದು, ಹಳಿಯಾಳದ ಗರಿಮೆ ಹೆಚ್ಚಿಸಲಿವೆ.

ಜಾನಪದ ವೈಭವ-2026 ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ಸಂಸ್ಕೃತಿಯ ಅನಾವರಣಕನ್ನಡಪ್ರಭ ವಾರ್ತೆ ಹಳಿಯಾಳ

ಜರ್ಮನಿಯ ಫ್ರಾಂಕ್ ಫರ್ಟ್‌ನಲ್ಲಿ ನಡೆಯಲಿರುವ ಜಾನಪದ ವೈಭವ-2026 ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಹಳಿಯಾಳದ ಸೂತ್ರದ ಗೊಂಬೆಗಳು ಪಾಲ್ಗೊಳ್ಳಲಿದ್ದು, ಹಳಿಯಾಳದ ಗರಿಮೆ ಹೆಚ್ಚಿಸಲಿವೆ.

ವಿಶ್ವ ಸಂಸ್ಕೃತಿ ಫೌಂಡೇಶನ್ ವತಿಯಿಂದ ರೂಪುಗೊಂಡಿರುವ ಹೊಂಗಿರಣದ ಸೂತ್ರದ ಗೊಂಬೆಗಳು ಈ ಉತ್ಸವದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿವೆ.

ಮೇ 23ರಂದು ಜರ್ಮನಿಯ ಫ್ರಾಂಕ್ ಫರ್ಟ್‌ನ ಸೀಗೆನರ್ ಸ್ಟ್ರಾಸೆ 22 ರಂಗಮಂದಿರದಲ್ಲಿ ನಡೆಯಲಿರುವ ಉತ್ಸವವನ್ನು ರೈನ್ ಮೇನ್ ಕನ್ನಡ ಸಂಘ (ಜರ್ಮನಿ) ಹಾಗೂ ಬೆಂಗಳೂರಿನ ಆರಂಭ್ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಈ ವೇದಿಕೆಯಲ್ಲಿ ಹಳಿಯಾಳ ತಾಲೂಕಿನ ಹೊಂಗಿರಣ ಕಲಾತಂಡವು ಕರ್ನಾಟಕ ಗತವೈಭವ ಎಂಬ ವಿಶಿಷ್ಟ ಸೂತ್ರದ ಗೊಂಬೆಯಾಟ ಪ್ರಸಂಗ ಪ್ರದರ್ಶಿಸಲಿದೆ. ನಾರಾಯಣ ಭಾಗವತ್ ಸಾಹಿತ್ಯ ರಚಿಸಿದ್ದು, ಸಂಗೀತ ನಿರ್ದೇಶನವನ್ನು ವಿಶ್ವನಾಥ ಹಿರೇಮಠ ನೀಡಿದ್ದಾರೆ. ಡಾ. ಶ್ರೀಪಾದ ಭಟ್ ಮಾರ್ಗದರ್ಶನ ನೀಡಿದ್ದು, ಸಂಘಟನೆಯ ಜವಾಬ್ದಾರಿಯನ್ನು ಗೊಂಬೆ ಕಲಾತಜ್ಞ, ಪ್ರೌಢಶಾಲಾ ಶಿಕ್ಷಕ ಸಿದ್ದಪ್ಪ ಬಿರಾದಾರ ವಹಿಸಿದ್ದಾರೆ.

ಕರ್ನಾಟಕ ಜನಪದ ಕಲಾವಿದ ಒಕ್ಕೂಟದ ಅಧ್ಯಕ್ಷ ಕೆ.ನಾಗರಾಜ್ ಅವರ ನೇತೃತ್ವದಲ್ಲಿ ಹಳಿಯಾಳದ ಹೆಮ್ಮೆಯ ಕಲಾವಿದರ ತಂಡವು ಜರ್ಮನಿ ಪ್ರವಾಸ ಕೈಗೊಂಡಿದೆ.

ಈ ಬಾರಿಯ ಜಾನಪದ ವೈಭವ-2026 ಉತ್ಸವದಲ್ಲಿ ಸೂತ್ರದ ಗೊಂಬೆಯಾಟದ ಜೊತೆಗೆ ಕರ್ನಾಟಕದ ಖ್ಯಾತ ಕಲಾವಿದರಿಂದ ಕನ್ನಡ ಮತ್ತು ಜಾನಪದ ಗೀತೆಗಳ ಗಾಯನ, ಶಾಸ್ತ್ರೀಯ ನೃತ್ಯ, ವಿವಿಧ ಜನಪದ ನೃತ್ಯ ರೂಪಕಗಳು ಹಾಗೂ ಸಾಂಸ್ಕೃತಿಕ ಜುಗಲ್ಬಂದಿಗಳು ನಡೆಯಲಿವೆ. ಜರ್ಮನಿಯ ನೆಲದಲ್ಲಿ ಕನ್ನಡದ ಕಂಪು ಹರಡುವ ಈ ಉತ್ಸವವು ಅನಿವಾಸಿ ಕನ್ನಡಿಗರಲ್ಲಿ ಹೊಸ ಸಂಸ್ಕೃತಿ ಚೇತನ ಮೂಡಿಸುವಂತಾಗಿದೆ ಎಂದು ಗೊಂಬೆಯಾಟ ಕಲಾತಜ್ಞ ಸಿದ್ಧಪ್ಪ ಬಿರಾದಾರ ತಿಳಿಸಿದ್ದಾರೆ.

ಹಳಿಯಾಳದ ಗ್ರಾಮೀಣ ಜನಪದ ಕಲೆಯೊಂದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಪಡೆಯುತ್ತಿರುವುದು ಉತ್ತರಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ಬಯಲಾಟ ಆಕಾಡೆಮಿಯ ಸದಸ್ಯೆ ಸುಜಾತಾ ಬಿರಾದಾರ ಸಂತಸ ವ್ಯಕ್ತಪಡಿಸಿದ್ದಾರೆ.