ಮನರೇಗಾ ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ. ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನ-ಮಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದರೆ. ಇದು ದಲಿತರ ಉದ್ಧಾರವೇ
ಅಕ್ರಮ ಮುಚ್ಚಿಕೊಳ್ಳಲು ವಿಬಿ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಚರ್ಚೆ । ಸಂಘರ್ಷದಿಂದ ಸಮಸ್ಯೆ ಬಗೆಹರಿಯಲ್ಲ. ಕೇಂದ್ರದೊಂದಿಗೆ ವಿಶ್ವಾಸದಲ್ಲಿರುವಂತೆ ಸಲಹೆ
ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯಪಾಲರ ವಿರುದ್ಧ ಗೋ ಬ್ಯಾಕ್, ಗೋ ಬ್ಯಾಕ್ ಎನ್ನುವುದರಿಂದ ರಾಜ್ಯ ಕಾಂಗ್ರೆಸ್ ಏನನ್ನೂ ಸಾಧಿಸುವುದಿಲ್ಲ. ಗೋ ಬ್ಯಾಕ್ ಗವರ್ನರ್ ಎನ್ನುವುದು ಕೇವಲ ರಾಜಕೀಯ ನಾಟಕವಷ್ಟೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು.ಭಾಷಣ ಮೊಟಕು ಹೊಸದೇನಲ್ಲ:
ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಬಯಲಾಗುತ್ತದೆ. ವಿಶೇಷ ಅಧಿವೇಶನ ಕರೆದು ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿಲ್ಲ. ಹಿಂದೆ ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ ಎಂದು ಪ್ರಶ್ನಿಸಿದರು.ಕೇಂದ್ರ ಸರ್ಕಾರ ನಿಂದಿಸುವ ಉದ್ದೇಶ:
ಮನರೇಗಾ ವಿಷಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ. ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನ-ಮಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದರೆ. ಇದು ದಲಿತರ ಉದ್ಧಾರವೇ ಎಂದು ಕಿಡಿಕಾರಿದರು.ಹೆದ್ದಾರಿ ಯೋಜನೆಗಳು ವಾಪಸ್:
ಈ ಸರ್ಕಾರದಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಕಾನೂನು ಬಾಹಿರ ನಿರ್ಧಾರಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಅವಕಾಶ ಇದ್ದರೂ ಬೇರೆ ರಾಜ್ಯಗಳ ರಾಜ್ಯಪಾಲರ ರೀತಿ ನಮ್ಮ ಸರ್ಕಾರದ ಜತೆ ಸಂಘರ್ಷ ಮಾಡಲಿಲ್ಲ. ಅದನ್ನು ಈ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರ ವಿಶ್ವಾಸದಲ್ಲಿಲ್ಲ. ಕೇಂದ್ರದ ಅನುದಾನದ ಬಗ್ಗೆ ರಾಜ್ಯ ಸರ್ಕಾರ ಪಾರದರ್ಶಕವಾಗಿ ಮಾಡಿಕೊಂಡಿಲ್ಲ. ಇವರ ತಪ್ಪಿನಿಂದ ಕೆಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.ರೈತರಿಗೆ ಸರ್ಕಾರದಿಂದ ಸರಣಿ ಅನ್ಯಾಯ:
ರೈತರಿಗೆ ಈ ಸರ್ಕಾರ ಸರಣಿ ಅನ್ಯಾಯ ಮಾಡಿದೆ. ಬೆಳೆ ಬೆಳೆದ ರೈತರನ್ನು ಇವರು ಕಾಪಾಡಿದ್ದಾರಾ? ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಮಾನದಂಡದಲ್ಲಿ ಎಷ್ಟು ಬೆಳೆ ಖರೀದಿ ಮಾಡಿದ್ದೀರಿ ಎಂಬುದನ್ನು ಹೇಳಲಿ? ಮಾವಿನ ಬೆಲೆ ಕುಸಿದಾಗ ಕೇಂದ್ರ ಸರ್ಕಾರದ ಮುಂದೆ ಇವರು ಅರ್ಜಿ ಹಿಡಿದುಕೊಂಡು ಹೋಗಿದ್ದರು. ನಾನು ಸಿಎಂ ಆಗಿದ್ದಾಗ ಮಾವು ಬೆಲೆ ಕುಸಿದಾಗ ರಾಜ್ಯ ಸರ್ಕಾರದ ವತಿಯಿಂದಲೇ ಹಣ ಕೊಟ್ಟೆ. ಇವರಿಗೆ ಕೆಲಸ ಮಾಡಲು ಆಗುತ್ತಿಲ್ಲ, ಆದರೆ ಕೇಂದ್ರವನ್ನು ನಿಂದಿಸಲು ನೆಪ ಹುಡುಕುತ್ತಾರೆ ಎಂದು ಕಟುವಾಗಿ ಟೀಕಿಸಿದರು.ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯಲ್ಲ. ಕೇಂದ್ರದ ಜತೆ ವಿಶ್ವಾಸದಲ್ಲಿದ್ದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನಾನು ಸಲಹೆ ನೀಡುತ್ತೇನೆ. ಮಾತೆತಿದ್ದರೆ ದೊಡ್ಡ ಪ್ರಮಾಣದ ಟ್ಯಾಕ್ಸ್ ಕಟ್ಟುತ್ತಿದ್ದೇವೆ ಅಂತೀರಾ. ತೆರಿಗೆ ಕಟ್ಟುವವರು ಜನರು. ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳಾಗಬೇಕು. ಅದನ್ನು ಬಿಟ್ಟು ಕೇವಲ ಹೈಡ್ರಾಮಾ ನಡೆಸಿದರೆ ಏನೂ ಆಗುವುದಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ:ರಾಜ್ಯ ರಾಜಕರಣಕ್ಕೆ ವಾಪಸ್ಸು ಬರುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆಯೋ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ಮಂಡ್ಯದಿಂದ ಲೋಕಸಭೆ ಚುನಾವಣೆಗೆ ನಿಲ್ಲುವ ಉದ್ದೇಶ ಇರಲಿಲ್ಲ. ಪುಟ್ಟರಾಜು ಅವರನ್ನು ನಿಲ್ಲಿಸಬೇಕು ಎಂದುಕೊಳ್ಳಲಾಗಿತ್ತು. ಅವತ್ತು ಅನಿವಾರ್ಯವಾಗಿ ನಾನು ಎಲೆಕ್ಷನ್ ಗೆ ನಿಂತೆ. ಸಂಸದನಾಗ್ತೀನಿ, ಕೇಂದ್ರ ಮಂತ್ರಿ ಆಗ್ತೀನಿ ಎಂದು ನನಗೆ ಗೊತ್ತಿರಲಿಲ್ಲ. ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋದವರು ಜೆಡಿಎಸ್ ಕಥೆ ಮುಗಿಯಿತು ಎಂದರು. ಆದರೆ, ನಮ್ಮ ಪಕ್ಷ ಯಾವ ರೀತಿಯಲ್ಲಿ ಗಟ್ಟಿಯಾಗುತ್ತಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಕೆಲವರಿಗೆ ಜೆಡಿಎಸ್ ಪಕ್ಷದ್ದೇ ಯೋಚನೆ. ನಮ್ಮ ಪಕ್ಷವನ್ನು ಮುಗಿಸಬೇಕು ಎನ್ನುವುದೇ ಅವರ ಚಿಂತೆ ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ಒಗ್ಗಟ್ಟಿನ ಹೋರಾಟ:ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಕಿತ್ತೊಗೆಯಲು ಜೆಡಿಎಸ್- ಬಿಜೆಪಿ ಒಟ್ಟಾಗಿ ಹೋರಾಟ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ನಾವು ಮೈತ್ರಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪೈಪೋಟಿ ಇರುವುದು ಸಹಜ. ಎಲ್ಲಾ ಪಕ್ಷಗಳಲ್ಲಿ ಅದು ಇರುತ್ತದೆ. ಕಾರ್ಯಕರ್ತರು ಸ್ಥಾನಮಾನಕ್ಕಾಗಿ ಚರ್ಚೆ ಮಾಡುತ್ತಾರೆ. ಆ ಕುರಿತು ಅಂತಿಮವಾಗಿ ನಾವು ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಇದ್ದರು.-------------
23ಕೆಎಂಎನ್ ಡಿ-4,5ಮೇಲುಕೋಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶಿವಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.