ಮಂಗಳೂರು: ಯಾವುದೇ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವುದೇ ನಮ್ಮ ಧ್ಯೇಯ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.ಮಂಗಳೂರು ನಗರ ಪೊಲೀಸ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಮತ್ತು ಕೆಎಸ್‌ಆರ್‌ಪಿ 7ನೇ ಪಡೆಯ ವತಿಯಿಂದ ಜಿಲ್ಲಾ ಡಿಎಆರ್‌ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಆರೋಪಿಗಳ ಬಂಧನ ಹಾಗೂ ನ್ಯಾಯಾಲಯಕ್ಕೆ ಹಾಜರಾಗದವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡುವಲ್ಲಿ ಪೊಲೀಸರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಉಳ್ಳಾಲದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಇತ್ತೀಚೆಗೆ ನಡೆದ ಆರಿಫ್‌ ಹುಸೈನ್‌ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವುದು ನಮ್ಮ ಗುರಿಯಾಗಿದೆ. ಒಬ್ಬ ರೌಡಿ ಶೀಟರ್‌ ಇನ್ನೊಬ್ಬ ರೌಡಿ ಶೀಟರ್‌ನನ್ನು ಕೊಂದರೆ ನಮ್ಮ ಕಾರ್ಯ ವಿಧಾನ ಬದಲಾಗುವುದಿಲ್ಲ ಎಂದೂ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದರು.ಮುಂದಿನ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶೇ.75 ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ ಎಂದರು.

ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೋಹನ್‌ ಕೊಟ್ಟಾರಿ ಗೌರವ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಮೂರು ಘಟಕಗಳ 49 ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು. ಉಪ ಪೊಲೀಸ್‌ ಆಯುಕ್ತ ಎಚ್‌.ಎನ್‌. ಮಿಥುನ್‌, ಬಂಟ್ವಾಳ ಡಿವೈಎಸ್ಪಿ ಕುಮಾರ್‌ ಶರ್ಮ ಹಾಗೂ ಕೆಎಸ್‌ಆರ್‌ಪಿ 7ನೇ ಪಡೆ ಕಮಾಂಡೆಂಟ್‌ ಹೇಮಂತ್‌ ಕುಮಾರ್‌ ಯು.ಎನ್‌. ಇದ್ದರು.