ಸಾವಿನ ಪ್ರಮಾಣ ಸೊನ್ನೆಗೆ ತರುವ ಗುರಿ

| Published : Aug 29 2024, 12:52 AM IST / Updated: Aug 29 2024, 12:53 AM IST

ಸಾರಾಂಶ

ದೇಶ ಹಾಗೂ ರಾಜ್ಯದಲ್ಲಿ ಸಂಚಾರ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ಅಪಘಾತ ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಶೇ.60ರಷ್ಟು ಅಪಘಾತ ಪ್ರಕರಣಗಳು ಬೈಕ್‌ನಿಂದಲೇ ಆಗುತ್ತಿದ್ದು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕೆಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕಕುಮಾರ ಜನರಿಗೆ ಮನವಿ ಮಾಡಿದರು.

ಹುಬ್ಬಳ್ಳಿ

ಪ್ರಸಕ್ತ ಸಾಲಿನಲ್ಲಿ ಸಂಚಾರ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ಅಪಘಾತ ಮತ್ತು ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಅಪಘಾತ ಮತ್ತು ಸಾವಿನ ಪ್ರಮಾಣವನ್ನು ಸೊನ್ನೆಗೆ ತರುವುದು ನಮ್ಮ ಗುರಿಯಾಗಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕಕುಮಾರ ಹೇಳಿದರು.

ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಅಧಿಕಾರಿಗಳ ಆಂತರಿಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿನ ಅಪಘಾತಗಳನ್ನು ಪರಿಶೀಲಿಸಿದರೆ ಈ ವರ್ಷ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಶೇ. 60ರಷ್ಟು ಬೈಕ್‌ನಿಂದಲೇ ಅಪಘಾತಗಳಾಗಿರುವುದು ಗಮನಕ್ಕೆ ಬಂದಿದೆ. ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಸಂಚರಿಸುವಂತೆ ಸೂಚನೆ ನೀಡಿದರು

2022ರಲ್ಲಿ ದೇಶದಲ್ಲಿ 1.67 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. 2023ರಲ್ಲಿ ರಾಜ್ಯದಲ್ಲಿ ಸರಾಸರಿ ಪ್ರತಿದಿನ 34 ಜನ ಸಾವನ್ನಪ್ಪಿದ್ದಾರೆ. ಆದರೆ, 2024ರಲ್ಲಿ ರಸ್ತೆ ಸಂಚಾರದ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ಅಪಘಾತ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟಾರೆ ಸಾವಿನ ಪ್ರಮಾಣವು ಸೊನ್ನೆಗೆ ತರುವುದು ನಮ್ಮ ಗುರಿಯಾಗಿದೆ. ಇದು ಅಸಾಧ್ಯದ ಮಾತು ಎಂಬುದು ಅಷ್ಟೇ ನಿಜ. ಆದರೆ, ಆ ದಿಕ್ಕಿನಡಿ ನಾವು ಶ್ರಮಿಸುವ ಮೂಲಕ ಕಡ್ಡಾಯವಾಗಿ ಎಲ್ಲರೂ ಸಂಚಾರಿ ನಿಯಮ ಪಾಲನೆ ಮಾಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಾರ್ವಜನಿಕರ ಸಹಕಾರ ಅವಶ್ಯ:

ಎಲ್ಲವನ್ನೂ ಪೊಲೀಸರೇ ನಿಯಂತ್ರಿಸಲು ಸಾಧ್ಯವಿಲ್ಲ. ಅಪಘಾತ ತಗ್ಗಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸುವುದು, ಹೆಲ್ಮೆಟ್ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಆಗ, ತನ್ನಿಂದ ತಾನೆಯೇ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅಲೋಕಕುಮಾರ ಹೇಳಿದರು.

ವಾಹನ ಸೀಜ್‌:

ವಾಹನ ಚಾಲನಾ ಪರವಾನಗಿ ಇಲ್ಲದೇ ರಸ್ತೆಗಿಳಿಯುವುದು, ಚಾಲನೆ ಬಾರದೇ ವಾಹನ ಓಡಿಸುವ ದುಸ್ಸಾಹಸ, ವ್ಹೀಲಿಂಗ್ ಮಾಡುವವರಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇನ್ನು ಗೂಡ್ಸ್ ವಾಹನ, ಆಟೋದಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ಕೂಡಿಸಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಅಂಥವರ ಚಾಲನಾ ಪರವಾನಗಿ ಪತ್ರ ರದ್ದುಪಡಿಸಿ, ವಾಹನವನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಗಮ ಸಂಚಾರಕ್ಕೆ ಅನುವು:

ಆಟೋ ರಿಕ್ಷಾಗಳಿಗೆ ಮೀಟರ್, ಡ್ರಿಂಕ್ ಆ್ಯಂಡ್ ಡ್ರೈವ್ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತಗಳ ಪ್ರಮಾಣ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದೇ ನಮ್ಮ ಮುಖ್ಯ ಉದ್ದೇಶ. ಅಪಘಾತ ಸಂಭವಿಸಿದಾಗ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಕಿಮ್ಸ್ ಆಸ್ಪತ್ರೆಯ ವೈದ್ಯರ ಜತೆಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಪೊಲೀಸರಿಗೆ ಕೆಲ ಮಾಹಿತಿಗಳನ್ನು ನೀಡಲಾಗಿದೆ ಎಂದರು.

ಈ ವೇಳೆ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಸೇರಿದಂತೆ ಹಲವರಿದ್ದರು.ಎರಡು ಗಂಟೆ ಸಭೆ:

ಮಹಾನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸುಮಾರು 2 ಗಂಟೆಗೂ ಹೆಚ್ಚುಕಾಲ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಲೋಕಕುಮಾರ, ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲನೆಗೆ ಬೇಕಾದ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕರೂ ಸಹ ಕಡ್ಡಾಯವಾಗಿ ಸಂಚಾರಿ ನಿಯಮ ಪಾಲನೆ ಮಾಡುವ ಕುರಿತು ಅರಿವು ಮೂಡಿಸುವುದು, ಅಪಘಾತ ಸಂಖ್ಯೆಗಳ ಕಡಿಮೆ ಮಾಡಲು ಬೇಕಾದ ಅಗತ್ಯ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.