ಸುರಕ್ಷಿತ ಹಾಗೂ ತಡೆರಹಿತ ಇಂಧನ ಪೂರೈಕೆ ದೃಷ್ಟಿಯಿಂದ ಹಾವೇರಿ ನಗರದಲ್ಲಿ ಪಿಎನ್‌ಜಿ (ಗ್ಯಾಸ್) ಜಾಲವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈಗಾಗಲೇ 184 ಗೃಹಬಳಕೆಯ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಪಿಎನ್‌ಜಿ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಥಿಂಕ್ ಗ್ಯಾಸ್ ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಮಂಜುನಾಥ ಅವರು ಹೇಳಿದರು.
ಹಾವೇರಿ: ಸುರಕ್ಷಿತ ಹಾಗೂ ತಡೆರಹಿತ ಇಂಧನ ಪೂರೈಕೆ ದೃಷ್ಟಿಯಿಂದ ಹಾವೇರಿ ನಗರದಲ್ಲಿ ಪಿಎನ್‌ಜಿ (ಗ್ಯಾಸ್) ಜಾಲವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈಗಾಗಲೇ 184 ಗೃಹಬಳಕೆಯ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಪಿಎನ್‌ಜಿ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಥಿಂಕ್ ಗ್ಯಾಸ್ ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಮಂಜುನಾಥ ಅವರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಕ್ಕೆ ಅನುಗುಣವಾಗಿ ಥಿಂಕ್ ಗ್ಯಾಸ್ ಏಜೆನ್ಸಿಯು ಜಿಲ್ಲಾದ್ಯಂತ ನೈಸರ್ಗಿಕ ಅನಿಲ ಮೂಲಸೌಕರ್ಯ ಪೂರೈಕೆಯನ್ನು ಕಲ್ಪಿಸುತ್ತಿದೆ. ಪ್ರಾರಂಭದಲ್ಲಿ ಹಾವೇರಿ ನಗರದಲ್ಲಿ ಅನುಷ್ಠಾನಗೊಳಿಸಿದ್ದು, ಸುಮಾರು 30 ಕಿಮೀ ಪೈಪ್‌ಲೈನ್ ಮೂಲಸೌಕರ್ಯ ಈಗಾಗಲೇ ಪೂರ್ಣಗೊಳಿಸಿದೆ. ವಿದ್ಯಾನಗರ ಮತ್ತು ಬಸವೇಶ್ವರ ನಗರದಂತಹ ಪ್ರಮುಖ ಪ್ರದೇಶಗಳಲ್ಲಿ ಪ್ರಾರಂಭಿಸಿದ್ದು, 350ಕ್ಕೂ ಹೆಚ್ಚು ಗ್ರಾಹಕರಿಂದ ನೋಂದಣಿಯಾಗಿದೆ. ಇದು ಗ್ರಾಹಕರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ 500 ಮನೆ ಹಾಗೂ ಆರು ತಿಂಗಳಲ್ಲಿ ಸಾವಿರ ಮನೆ ಸಂಪರ್ಕಿಸುವ ಗುರಿ ಹೊಂದಿದೆ ಎಂದರು.ಹಾವೇರಿಯಲ್ಲಿ ಅಂದಾಜು 13 ಸಾವಿರ ಮನೆಗಳಿದ್ದು, ಎರಡು ವರ್ಷಗಳಲ್ಲಿ ಎಲ್ಲ ಮನೆಗಳಿಗೂ ಸುರಕ್ಷಿತ ಪಿಎನ್‌ಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಆಸಕ್ತ ನಿವಾಸಿಗಳು ಸಿಲಿಂಡರ್ ಬುಕಿಂಗ್ ಅಗತ್ಯವಿಲ್ಲದೆ, ವಿಶ್ವಾಸಾರ್ಹ ಮತ್ತು ತಡೆರಹಿತ ಅಡುಗೆ ಇಂಧನ ಪರಿಹಾರದ ಪ್ರಯೋಜನ ಪಡೆದುಕೊಳ್ಳಬಹುದೆಂದು ತಿಳಿಸಿದರು.ತಾಲೂಕಿಗೂ ವಿಸ್ತರಣೆ: ಶುದ್ಧ ಇಂಧನ ಪ್ರವೇಶ ವಿಸ್ತರಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ, ನಾವು ಹಾವೇರಿಯಲ್ಲಿ ಪಿಎನ್‌ಜಿ (ಪೈಪ್ ನ್ಯಾಚುರಲ್ ಗ್ಯಾಸ್) ಜಾಲವನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ನಗರದಿಂದ ಪ್ರಾರಂಭಿಸಿ ಕ್ರಮೇಣ ಜಿಲ್ಲೆಯ ಇತರ ಭಾಗಗಳಿಗೆ ವಿಸ್ತರಿಸುತ್ತೇವೆ. ಮನೆಗಳು ತಮ್ಮ ದೈನಂದಿನ ಅಗತ್ಯಗಳಿಗಾಗಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಡೆರಹಿತ ಇಂಧನ ಪೂರೈಕೆ ಒದಗಿಸುವುದು ಮುಖ್ಯ ಆದ್ಯತೆಯಾಗಿದೆ. ಅಭಿವೃದ್ಧಿ ವೇಗ ಹೆಚ್ಚಿಸಲು ಜಿಲ್ಲೆಯ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಕಂಪನಿಯ ಸಹಾಯಕ ವ್ಯವಸ್ಥಾಪಕ ಸಂತೋಷ ಕುಲಕರ್ಣಿ ಮಾತನಾಡಿ, ಎಲ್‌ಪಿಜಿ ಸಿಲಿಂಡರ್‌ಗಳಿಗಿಂತ ಭಿನ್ನವಾಗಿ ಪಿಎನ್‌ಜಿಯನ್ನು ನಿರಂತರ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುತ್ತದೆ. ಇದು ಮರುಪೂರಣ ಮತ್ತು ಸಂಗ್ರಹಣೆಯ ಸವಾಲನ್ನು ನಿಯಂತ್ರಿಸುತ್ತದೆ. ಮೀಟರ್ ವ್ಯವಸ್ಥೆ ಮೂಲಕ ನಿಜವಾದ ಬಳಕೆಯ ಆಧಾರದ ಮೇಲೆ ಗ್ರಾಹಕರಿಗೆ ಪ್ರೀಪೈಯ್ಡ್ ಬಿಲ್ ನೀಡಲಾಗುತ್ತದೆ. ಇದರಿಂದ ಹಣದ ಉಳಿತಾಯವಾಗಲಿದ್ದು, ಪಾರದರ್ಶಕತೆ ಇರಲಿದೆ. ಹಸಿರು ಇಂಧನ ಚಾಲಿತ ಶಹರವನ್ನಾಗಿ ಮಾಡಲು ಕೈಜೋಡಿಸಬೇಕು ಎಂದು ತಿಳಿಸಿದರು.ಆಸಕ್ತ ಗ್ರಾಹಕರು ಆಧಾರ ಕಾರ್ಡ್, ಕರೆಂಟ್ ಬಿಲ್, ಬಾಡಿಗೆ ಅಗ್ರಿಮೆಂಟ್ ಸೇರಿ ಅಗತ್ಯ ದಾಖಲೆಯೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ನಂತರ 6 ಸಾವಿರ ರು. ಠೇವಣಿ ಇಡಬೇಕೆಂದು ವಿವರಿಸಿದ ಅವರು, ಹೆಚ್ಚಿನ ಮಾಹಿತಿಗೆ ಆರ್‌ಟಿಓ ಕಚೇರಿ ಬಳಿ ಇರುವ ಥಿಂಕ್ ಗ್ಯಾಸ್ ಕಚೇರಿಯನ್ನು ಸಂಪರ್ಕಿಸಬಹುದು. ಥಿಂಕ್ ಗ್ಯಾಸ್ ಕಂಪನಿ ಪ್ರಾದೇಶಿಕ ಮುಖ್ಯಸ್ಥ ಮಂಜುನಾಥ ಮೊ.9321051258, ಪ್ರಾಜೆಕ್ಟ್ ಎಂಜಿನಿಯರ್ ನಿತೇಶ ಮೊ. 8169257557 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಜೆಕ್ಟ ಎಂಜಿನಿಯರ್ ನಿತೇಶ, ಪ್ರಭಾಕರ, ಆರ್.ಪ್ರೇಮಕುಮಾರ ಸೇರಿದಂತೆ ಸಿಬ್ಬಂದಿ ಇದ್ದರು.