ಸಾರಾಂಶ
- ಅತಿ ಹಿಂದುಳಿದ ತಾಲೂಕಿನಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿಸಲು ಪ್ರಾಮಾಣಿಕ ಪ್ರಯತ್ನ: ಭರವಸೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ನಂಜುಂಡಪ್ಪ ವರದಿ ಅನ್ವಯ ಅತಿ ಹಿಂದುಳಿದ ತಾಲೂಕಾಗಿರುವ ಜಗಳೂರಿನಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಬೇಕು. ಈ ಭಾಗಕ್ಕೆ ನೀರು ಹರಿಸುವ ಮೂಲಕ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ತೊಡೆದು ಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜನತೆಗೆ ಭರವಸೆ ನೀಡಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪುಣಬಘಟ್ಟ, ಕಮ್ಮತ್ತಹಳ್ಳಿ ಗ್ರಾಮಗಳಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿದ ಅವರು, ಜಗಳೂರು ತಾಲೂಕಿಗೆ ವಿಶೇಷ ಯೋಜನೆಗಳ ತರುವ ಉದ್ದೇಶವಿದೆ. ಇದಕ್ಕಾಗಿ ಹೆಚ್ಚು ಕಾಳಜಿ ವಹಿಸುವೆ ಎಂದರು.ಉದ್ಯೋಗ ಖಾತ್ರಿ ಯೋಜನೆಯಡಿ ಈ ಕ್ಷೇತ್ರ ಹೆಚ್ಚು ಅನುದಾನ ಬಳಸಿದೆ. ಹಾಗಾಗಿ ರಸ್ತೆ, ಚರಂಡಿ ಸುಧಾರಣೆಯಾಗಿವೆ. ಪ್ರಧಾನಿ ಮೋದಿ ಜಾರಿಗೊಳಿಸಿದ ವಿಮಾ ಯೋಜನೆ ಜನರ ಜೀವನಮಟ್ಟ ಸುಧಾರಿಸಿವೆ. ಅಂತರ್ಜಲಮಟ್ಟ ಸಾಕಷ್ಟು ಕುಸಿದಿದ್ದು, ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗುವೆ. ಭದ್ರಾ ಮೇಲ್ದಂಡೆ ಯೋಜನೆ ಸಹ ಕ್ಷೇತ್ರಕ್ಕೆ ವರವಾಗಿದೆ. ಇದಕ್ಕಾಗಿ ಕೇಂದ್ರವು ₹5300 ಕೋಟಿ ನೀಡಿದೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಹರಪನಹಳ್ಳಿ ತಾಲೂಕಿನ 7 ಗ್ರಾ.ಪಂ.ಗಳು ಬಿಜೆಪಿಗೆ ಹೆಚ್ಚು ಮತ ನೀಡಿ, ಆಶೀರ್ವದಿಸಿವೆ. ಈ ಸಲ ಅದಕ್ಕಿಂತ ಹೆಚ್ಚು ಮತ ನೀಡಿ, ಆಶೀರ್ವದಿಸಿ. ಪ್ರತಿ ಕಾರ್ಯಕರ್ತನೂ ತಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡಿರಿ. ನೀವು ಹಾಕಿಸುವ ಒಂದೊಂದು ಮತವೂ ದೇಶವನ್ನು ಸಮಗ್ರವಾಗಿ ಬಲಪಡಿಸುತ್ತದೆ. ನಿಮ್ಮ ಮಕ್ಕಳ ಭವಿಷ್ಯವೂ ಉಜ್ವಲವಾಗುತ್ತದೆ. ನಾನು ಬರೀ ಮಾತನಾಡುವುದಿಲ್ಲ. ಕೆಲಸ ಮಾಡಿ, ತೋರಿಸುತ್ತೇನೆ. ಮತ ನೀಡಿ, ಗೆಲ್ಲಿಸಿ ಎಂದು ಮನವಿ ಮಾಡಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಮೋದಿ ಅವರನ್ನು 3ನೇ ಬಾರಿಗೆ ಪ್ರಧಾನಿ ಮಾಡುವ ಹೊಣೆ ನಮ್ಮ, ನಿಮ್ಮೆಲ್ಲರ ಮೇಲಿದೆ. ಗಾಯತ್ರಕ್ಕನಿಗೆ ಅತಿ ಹೆಚ್ಚು ಮತ ನೀಡಿ, ಗೆಲ್ಲಿಸೋಣ. ನಾನು, ರಾಮಚಂದ್ರಣ್ಣ ಶಾಸಕರಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇವೆ. 57 ಕೆರೆ ತುಂಬಿಸುವ ಯೋಜನೆ ತರುವಲ್ಲಿ ನಮ್ಮಿಬ್ಬರ ಕೊಡುಗೆ ಇದೆ. ಆಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಣ ಮಂಜೂರು ಮಾಡಿ, ಯೋಜನೆಗೆ ಚಾಲನೆ ನೀಡಿದ್ದರು. ಅದರ ಪರಿಣಾಮವೇ ಚಟ್ನಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದೆ. ಈ ಕ್ಷೇತ್ರಕ್ಕೆ ಸಿದ್ದೇಶಣ್ಣ, ಮತ್ತುವರ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಕೊಡುಗೆ ಅಪಾರ. ಇನ್ನು 22 ದಿನ ಸಮರೋಪಾದಿಯಲ್ಲಿ ಮನೆ ಮನೆಗೆ ತಲುಪಿ, ಗಾಯತ್ರಕ್ಕನ ಪರ ಮಚಯಾಚಿಸಿ ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದೇಶಣ್ಣ ತಲುಪದ ಹಳ್ಳಿ ಇಲ್ಲ. ಇಡೀ ಕ್ಷೇತ್ರದಲ್ಲಿ ಸಿದ್ದೇಶಣ್ಣ ಜನರನ್ನು ಸಂಪಾದಿಸಿದ್ದಾರೆ. 4 ಸಲ ಸಿದ್ದೇಶಣ್ಣ, 2 ಸಲ ಜಿ.ಮಲ್ಲಿಕಾರ್ಜುನಪ್ಪ ಒಟ್ಟು 6 ಅವಧಿಗಳಿಗೆ ಸಂಸದರಾಗಿದ್ದಾರೆ. 7ನೇ ಸಲ ಗಾಯತ್ರಿ ಸಿದ್ದೇಶ್ವರ ಸಂಸದೆ ಆಗುವುದು ನಿಶ್ಚಿತ. ಇಷ್ಟೂ ಸಲ ಗೆಲ್ಲಲು ಸಿದ್ದೇಶ್ವರರ ಕುಟುಂಬ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿವೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ನಮ್ಮ ಹಿತೈಷಿಗಳು ಹೆಚ್ಚಿನ ಮತ ನೀಡಿ, ಗಾಯತ್ರಿ ಸಿದ್ದೇಶ್ವರರನ್ನು ಗೆಲ್ಲಿಸಬೇಕು ಎಂದು ಕೋರಿದರು.ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಬಳ್ಳಾರಿ ಸಂಸದ ಅರಸೀಕೆರೆ ದೇವೇಂದ್ರಪ್ಪ, ಅಣ್ಣಪ್ಪ, ಪಲ್ಲಾಗಟ್ಟಿ ಮಹೇಶ, ಕೆಂಚಮ್ಮನಹಳ್ಳಿ ಮಂಜಣ್ಣ, ಬಿದರಕೆರೆ ರವಿಕುಮಾರ, ಅರಸೀಕೆರೆ ದ್ಯಾಮೇಗೌಡ್ರು, ಇಂದಿರಾ ರಾಮಚಂದ್ರಪ್ಪ, ಸೊಕ್ಕೆ ನಾಗರಾಜ, ಮಂಜುನಾಥ, ಪಣಿಯಾಪುರ ಲಿಂಗರಾಜ, ಜಂಬನಗೌಡ, ಜೆಡಿಎಸ್-ಬಿಜೆಪಿ ಮುಖಂಡರು, ಕಾರ್ಯಕರ್ತರು, ಗ್ರಾಪಂ ಸದಸ್ಯರು, ಬೂತ್ ಅಧ್ಯಕ್ಷರು, ಗ್ರಾಮಸ್ಥರು ಇದ್ದರು.
ಚಟ್ನಹಳ್ಳಿ, ಉಚ್ಚಂಗಿದುರ್ಗ, ಅಣಜಿಗೆರೆ, ಪುಣಬಘಟ್ಟ, ಕಮ್ಮತ್ತಹಳ್ಳಿ, ತೌಡೂರು, ಅರಸೀಕೆರೆ, ಹೊಸಕೋಟೆ, ಬಸವನಕೋಟೆ, ಗುರುಸಿದ್ಧಾಪುರ, ಸೊಕ್ಕೆ ಗ್ರಾಪಂ ವ್ಯಾಪ್ತಿಯಲ್ಲಿ ಮತಯಾಚಿಸಿದರು. ಉಚ್ಚಂಗಿದುರ್ಗದಲ್ಲಿ ಶಕ್ತಿ ದೇವತೆ ಉಚ್ಚಂಗೆಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಮತ ಬೇಟೆಗೆ ತೆರಳಿದ ಪ್ರತಿ ಗ್ರಾಮದಲ್ಲೂ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು.- - - ಮೋದಿಗೆ ಯಾಕೆ ಓಟು ಹಾಕಬೇಕಂತ ಗೊತ್ತಾ? - ಪ್ರಾಣ ಉಳಿಸಿದ ಮೋದಿಗಲ್ಲದೇ, ಯಾರಿಗೆ ಹಾಕೋಣ ಅಂದೆ: ಜೆಡಿಎಸ್ ಕಲ್ಲೇರುದ್ರೇಶ
ಕನ್ನಡಪ್ರಭ ವಾರ್ತೆ, ದಾವಣಗೆರೆಯಾರೋ ಒಂದಿಬ್ಬರು ನರೇಂದ್ರ ಮೋದಿಗೆ ಯಾಕೆ ಓಟು ಹಾಕಬೇಕೆಂದು ಕೇಳಿದರು. ಯಾಕೆ ಮೋದಿ ಅವರನ್ನೇ ಪ್ರಧಾನಿ ಮಾಡಬೇಕೆಂದರು. ಆಗ, ನೀನು ಇವತ್ತು ಬದುಕಿರುವುದಕ್ಕಾದರೂ ಮೋದಿಗೆ ಓಟು ಹಾಕಬೇಕೆಂದು ಹೇಳಿದೆ ಎಂದು ಜೆಡಿಎಸ್ ಮುಖಂಡ ಕೆ.ಬಿ.ಕಲ್ಲೇರುದ್ರೇಶ ಹೇಳಿದರು.
ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಬಂದಾಗ ಇಟಲಿ ದೇಶ ವಿಲವಿಲನೇ ಒದ್ದಾಡಿತ್ತು. ಆದರೆ, ಹಿಂದು ರಾಷ್ಟ್ರ ಭಾರತದಲ್ಲಿ ಅಷ್ಟು ಜನ ಸತ್ತು, ಇಷ್ಟು ಜನ ಸತ್ತರೆಂದು, ಹಿಂದು ರಾಷ್ಟ್ರ ಮುಳುಗತ್ತದೆಂದು ಇಟಲಿಯವರು ಮಾತನಾಡಿದ್ದರು. ಆದರೆ, ಮೋದಿ ಸರ್ಕಾರ ಎಲ್ಲರಿಗೂ ಸರಿಯಾದ ಸಮಯಕ್ಕೆ ಲಸಿಕೆ ಕೊಟ್ಟು ಅಮೂಲ್ಯ ಜೀವ ಉಳಿಸಿದ್ದನ್ನು ತಿಳಿಹೇಳಿದೆ ಎಂದರು.ನೀವು ಸಹ ಗಾಯತ್ರಮ್ಮ ಸಿದ್ದೇಶ್ವರಗೆ ಗೆಲ್ಲಿಸಿ, ಮೋದಿ ಪ್ರಧಾನಿ ಮಾಡಬೇಕಾದ ಅಗತ್ಯತೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಅವರು ತಿಳಿಸಿದರು.
- - - ಕೋಟ್ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರಿಗೆ ಸುಲಭವಾಗಿ ಸಿಗುವವರು ಹಾಗೂ ಸುಲಭವಾಗಿ ಸಿಗದೇ ಇರುವವರ ನಡುವೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಇಡೀ ಕ್ಷೇತ್ರದ ಜನರು, ಮತದಾರರು ಯಾರನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರ ಈಗ ಮಾಡಬೇಕಿದೆ. ಮತ ನೀಡುವ ಮುನ್ನ ಹತ್ತಾರು ಸಲ ಯೋಚಿಸಿ, ಮತ ಚಲಾಯಿಸಿ. ನಾನು ಸದಾ ನಿಮ್ಮೊಂದಿಗೆ ಇರುವ, ಸುಲಭವಾಗಿ ಸಿಗುವ ಅಭ್ಯರ್ಥಿ ಎಂಬುದು ನೆನಪಿರಲಿ- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ
- - - -14ಕೆಡಿವಿಜಿ7, 8, 9:ಜಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಎಚ್.ಪಿ.ರಾಜೇಶ, ಇಂದಿರಾ ರಾಮಚಂದ್ರ ಮತಯಾಚಿಸಿದರು.
-14ಕೆಡಿವಿಜಿ10:ಜಗಳೂರು ಕ್ಷೇತ್ರದ ಗ್ರಾಮವೊಂದರಲ್ಲಿ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಕ್ಕಳಿಗೆ ಸಿಹಿ ತಿನ್ನಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ.