ಬಿವೈವಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವ ಗುರಿ

| Published : Nov 23 2025, 01:30 AM IST

ಬಿವೈವಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಮಾಡಿ, ಅಧಿಕಾರಕ್ಕೆ ಬರುವುದೇ ನಮ್ಮ ಗುರಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾವಣಗೆರೆ: ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಮಾಡಿ, ಅಧಿಕಾರಕ್ಕೆ ಬರುವುದೇ ನಮ್ಮ ಗುರಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ಮಾಡಿ, ಅಧಿಕಾರಕ್ಕೆ ಬರುವುದು ನಮ್ಮೆಲ್ಲರ ಗುರಿಯಾಗಿದೆ. ಆದರೆ, ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಕೆಲವರು ದೆಹಲಿ ಪ್ರವಾಸ ಹೊರಟಿರುವುದನ್ನು ನೋಡಿದರೆ ನನಗೆ ನಗಬೇಕೋ, ಅಳ‍ಬೇಕೋ ಗೊತ್ತಾಗುತ್ತಿಲ್ಲ ಎಂದರು.

ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಅಂತಹವರು ಆತ್ಮಾವಲೋಕನ ಮಾಡಿಕೊಳ್ಳಲಿ ಅಂತಾ ಮಾತ್ರ ಹೇಳುತ್ತೇನೆ. 2013ರ ಚುನಾವಣೆಯಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ ಪಕ್ಷಕ್ಕೆ ಓಡಿ ಹೋಗಿದ್ದರು. ಈಗ ಬಹಳ ಪಕ್ಷ, ಸಿದ್ಧಾಂತ, ತತ್ವ, ನಿಷ್ಠೆ ಮಾತುಗಳನ್ನಾಡುತ್ತಿದ್ದಾರೆ. ಆಗ ಕಾಂಗ್ರೆಸ್ಸಿಗೆ ಹೋದಾಗ ಇವೆಲ್ಲವೂ ಎಲ್ಲಿ ಹೋಗಿದ್ದವು ಎಂದು ಅವರು ಪ್ರಶ್ನಿಸಿದರು.ನಮ್ಮ ಪಕ್ಷದ ನಾಯಕರು ಸೂಚಿಸಿದ್ದರಿಂದ ನಾವ್ಯಾರೂ ಮಾತನಾಡುತ್ತಿಲ್ಲ. ನಾವು ಮಾತನಾಡದೇ ಇರುವುದನ್ನು ದೌರ್ಬಲ್ಯವೆಂದು ತಿಳಿದುಕೊಳ್ಳಬೇಡಿ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಪಕ್ಷಕ್ಕೆ ಹೊಸ ಹುರುಪು ಬಂದಿದೆ. ಯಡಿಯೂರಪ್ಪನವರಿಗೆ ಯಾವ ರೀತಿ ನೋಡುತ್ತಿದ್ದರೋ ಅದೇ ರೀತಿ ವಿಜಯೇಂದ್ರರನ್ನೂ ಜನ ನೋಡುತ್ತಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ವಿಶ್ವಾಸವಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾವೇಶದಲ್ಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಿ.ವೈ.ರಾಘವೇಂದ್ರ ಒಳ್ಳೆಯ ಕೆಲಸ ಮಾಡಿದ್ದಾರೆಂದು ಹೇಳಿದ್ದರೆ ಹೊರತು ಯಾವುದೇ ಬಿಜೆಪಿ-ಕಾಂಗ್ರೆಸ್ ಸಮಾವೇಶದಲ್ಲಿ ಅಲ್ಲ ಎಂದು ಅವರು ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದರು.

ನಾವು ಬಿಜೆಪಿ ಜೊತೆಗಿದ್ದೇವೆ. ಯಾರು ಬಣಗಳೆಂದು ಹೇಳುತ್ತಾರೋ ಅಂತಹವರನ್ನೇ ಕೇಳಿಕೊಳ್ಳಿ. ನಾವು ಯಾವುದೇ ವ್ಯಕ್ತಿಯ ಜೊತೆ ಇರುವುದಕ್ಕೆ ಸಾಧ್ಯವಿಲ್ಲ. ಪಕ್ಷದ ಜೊತೆಗೆ ನಾವಿರುತ್ತೇವೆ. ವಿಜಯೇಂದ್ರ ನಮ್ಮ ರಾಜ್ಯಾಧ್ಯಕ್ಷರು. ನಮ್ಮ ಅಧ್ಯಕ್ಷರ ಜೊತೆಗಿದ್ದೇವೆ ಎಂದು ಎರಡೂ ಬಣ ಒಂದಾಗಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಯತ್ನಾಳ್‌ ಕೀಳು ಹೇಳಿಕೆಗೆ ಕಿಡಿದಾವಣಗೆರೆ: ವಿಜಯೇಂದ್ರ ಯಶಸ್ಸನ್ನು ಸಹಿಸದೇ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರ ಯುವಕರ ಕಣ್ಮಣಿ, ಹುಟ್ಟು ಹೋರಾಟಗಾರ, ರೈತ ಹೋರಾಟಗಾರ. ರೈತರ ಜೊತೆಯಲ್ಲೇ ಜನ್ಮದಿನ ಆಚರಿಸಿಕೊಂಡವರು ವಿಜಯೇಂದ್ರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ್ಮದಿನಕ್ಕೆ ಶುಭ ಕೋರಿದ್ದನ್ನೇ ವ್ಯಂಗ್ಯ ಮಾಡುತ್ತಾರೆಂದರೆ ಅದು ಟೀಕೆ ಮಾಡುವವರ ಕೊಳಕು ಮನಸ್ಸನ್ನು ತೋರಿಸುತ್ತದೆ ಎಂದರು. ಇಲ್ಲಿ ಯಾರೂ ಯೋಗಿ ಆದಿತ್ಯನಾಥ ಆಗೋಕೆ ಸಾಧ್ಯವೇ ಇಲ್ಲ. ಪಕ್ಷದಿಂದ ಉಚ್ಛಾಟಿತರಾಗಿ ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ದರೆಂದು ಆರೋಪಿಸುತ್ತಾರೆ. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದ ಬಸನಗೌಡ ಪಾಟೀಲ ಯತ್ನಾಳ್‌ ಆಗ ಯಾವ ರೀತಿ ನಡೆದುಕೊಂಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯತ್ನಾಳ್‌ಗೆ ಇಲ್ಲ ಎಂದರು. ಯತ್ನಾಳ್‌ ಜೆಸಿಬಿ ತರಲಿ, ಪಕ್ಷ ಕಟ್ಟಲಿ, ರಾಜ್ಯದ 224 ಕ್ಷೇತ್ರಲ್ಲೂ ಸ್ಪರ್ಧಿಸಲಿ. ಯತ್ನಾಳ್‌ ನಮ್ಮ ಪಕ್ಷದಿಂದ ಉಚ್ಛಾಟಿತರಾಗಿದ್ದಾರೆ. ಗಣೇಶೋತ್ಸವದಲ್ಲಿ ಬಹಳಷ್ಟು ಯುವಕರು ಸೇರಿರುತ್ತಾರೆ. ನಾವು ಹೋಗಿ ಭಾಷಣ ಮಾಡಿದರೂ ಚೆಪ್ಪಾಳೆ ತಟ್ಟುತ್ತಾರೆ. ಜೆಡಿಎಸ್ ಪಕ್ಷಕ್ಕೆ ಹೋಗಿ, ಕಬಾಬು ಬಿರಿಯಾನಿ ತಿಂದಿದ್ದೆಯಲ್ಲ ಅವಾಗ ಬಿಜೆಪಿ ಪಕ್ಷ, ಸಿದ್ಧಾಂತ, ಹಿಂದುತ್ವವೆಲ್ಲಾ ಎಲ್ಲಿ ಹೋಗಿತ್ತು? ಅವಾಗೇನೂ ಮೊಹಮ್ಮದ್ ಪೈಗಂಬರ್ ಆಗಿದ್ಯಾ? ಟಿಪ್ಪು ಆಗಿದ್ಯಾ ಎಂದು ಯತ್ನಾಳಿ ವಿರುದ್ಧ ಹರಿಹಾಯ್ದರು.

25ಕ್ಕೆ ಎಸಿ ಕಚೇರಿಗೆ ಮುತ್ತಿಗೆದಾವಣಗೆರೆ: ಹೊನ್ನಾಳಿಯ ನಮ್ಮ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ನೆಪ ಮಾತ್ರಕ್ಕೆ ರೈತರ ಸಭೆ ಮಾಡಿ, 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿದ್ದಾರೆ. ಆದರೆ, ರೈತರು ಬೆಳೆದ ಎಲ್ಲಾ ಮೆಕ್ಕೆಜೋಳ, ಭತ್ತವನ್ನು ಸರ್ಕಾರ ಖರೀದಿಸುವಂತೆ ಆಗ್ರಹಿಸಿ ನ.25ರಂದು ದಾವಣಗೆರೆ ಜಿಲ್ಲಾ ಕೇಂದ್ರಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ದಾವಣಗೆರೆಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ರೈತರು ಬೆಳೆದ ಭತ್ತ ಮತ್ತು ಮೆಕ್ಕೆಜೋಳವನ್ನು ಸಂಪೂರ್ಣ ಖರೀದಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಿದ್ದೇವೆ ಎಂದರು.