ಪ್ರತಿಯೊಬ್ಬರು ದೇವರನ್ನು ಪ್ರೀತಿಸಿ ಐಕ್ಯವಾಗುವುದೇ ಜೀವನದ ಗುರಿ

| Published : Mar 01 2024, 02:19 AM IST

ಪ್ರತಿಯೊಬ್ಬರು ದೇವರನ್ನು ಪ್ರೀತಿಸಿ ಐಕ್ಯವಾಗುವುದೇ ಜೀವನದ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೇಷ್ಠ ದಾರ್ಶನಿಕರಾದ ಮೆಹರಬಾಬಾರವರ ಮಾನವೀಯ ಮೌಲ್ಯಗಳು ನಮಗೆಲ್ಲ ಅನುಕರಣೀಯ. ಸಮಾಜದಲ್ಲಿ ಜಾತಿ,ಮತ, ಪಂಥ ಎಂಬ ಭೇದಗಳನ್ನು ಧಿಕ್ಕರಿಸಿ ಸೌಹಾರ್ಧಯುತವಾಗಿ ಸಾಮರಸ್ಯದಿಂದ ನಾವೆಲ್ಲ ಬಾಳಬೇಕು

ಧಾರವಾಡ: ಎಲ್ಲ ಧರ್ಮಗಳ ಮೂಲತತ್ವ ಒಂದೇ. ಅವುಗಳು ಕಾಲ ಕಾಲಕ್ಕೆ ಮಾರ್ಪಾಡಾಗಿ ಜೀವನ ಕ್ರಮದಲ್ಲಿ ಬದಲಾಗುತ್ತಾ ಹೋಗಬಹುದು. ಪ್ರತಿ ಮಾನವ ದೇವರನ್ನು ಪ್ರೀತಿಸಿ ಐಕ್ಯವಾಗುವುದು ಜೀವನದ ಗುರಿ. ಅದರಲ್ಲಿಯೇ ಮೋಕ್ಷ ಇದೆ ಎಂದು ಬೆಂಗಳೂರಿನ ಮೆಹರಬಾಬಾ ವಿಶ್ವ ಆಧ್ಯಾತ್ಮಿಕ ಕೇಂದ್ರದ ನರ್ಮದಾ ನಾಗೇಶ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅವತಾರ ಮೆಹರ ಬಾಬಾರವರ ದತ್ತಿ ಅಂಗವಾಗಿ ಆಯೋಜಿಸಿದ್ದ ಮೆಹರ ಪುರಸ್ಕಾರ ಪ್ರದಾನದಲ್ಲಿ ಮಾತನಾಡಿದ ಅವರು, ಸಾಧು, ಸಂತರು, ಮುನಿಗಳು, ಸೂಫಿಗಳು ಎಲ್ಲರು ಮಾನವ ಕುಲಕ್ಕೆ ಆಧ್ಯಾತ್ಮದ ಮೂಲಕ ಒಳ್ಳೆಯದನ್ನೇ ಬಯಸಿದವರು. ಅದೇ ರೀತಿ ಮೆಹರಬಾಬಾ ಒಬ್ಬ ಅವತಾರ ಪುರುಷರಾಗಿ ಅಧ್ಯಾತ್ಮದ ಮೂಲಕ ತಮ್ಮದೇ ಆದಂತಹ ಕೊಡುಗೆ ಸಮಾಜಕ್ಕೆ ನೀಡಿದ ಮಹಾನ್ ಸಂತರು. ದೀನರು, ಬಡವರು, ರೋಗಿಗಳಿಗೆ ಸಾಕ್ಷಾತ್ ತಾಯಿಯ ರೂಪದಲ್ಲಿ ಜಾತಿ, ಮತ, ಪಂಥ ಎನ್ನದೇ ಸೇವೆಗೈದ ಮೆಹರಬಾಬಾ ಮೇರು ವ್ಯಕ್ತಿತ್ವದ ಅವತಾರ ಪುರುಷರಾಗಿ ನಿಲ್ಲುತ್ತಾರೆ ಎಂದರು.

ಕವಿ, ಸಾಹಿತಿ, ಆಧ್ಯಾತ್ಮಿಕ ಚಿಂತಕ ಎ.ಎ.ದರ್ಗಾ ಅವರು ಮೆಹರಬಾಬಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶ್ರೇಷ್ಠ ದಾರ್ಶನಿಕರಾದ ಮೆಹರಬಾಬಾರವರ ಮಾನವೀಯ ಮೌಲ್ಯಗಳು ನಮಗೆಲ್ಲ ಅನುಕರಣೀಯ. ಸಮಾಜದಲ್ಲಿ ಜಾತಿ,ಮತ, ಪಂಥ ಎಂಬ ಭೇದಗಳನ್ನು ಧಿಕ್ಕರಿಸಿ ಸೌಹಾರ್ಧಯುತವಾಗಿ ಸಾಮರಸ್ಯದಿಂದ ನಾವೆಲ್ಲ ಬಾಳಬೇಕು ಎಂದರು.

ನಾರಾಯಣಪುರ ಲೈನ್ಸ್ ಸ್ಕೂಲ್‌ನ ಪ್ರಾಂಶುಪಾಲರಾದ ಶಶಿಕಲಾ ಹೆಬ್ಳಿಕರ್, ಕವಿವ ಸಂಘದ ಅಧ್ಯಕ್ಷ ಚಂದ್ರಕಾತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿ ದಾನಿ ಯು.ಎಸ್. ಕುನ್ನಿಭಾವಿ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಪೂಜಾರ ವಂದಿಸಿದರು.