ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರವು ಹಿಂದುಳಿದ ವರ್ಗಗಳ ಜನರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಕೃಷಿಗೆ ಅನುದಾನ ಬಿಡುಗಡೆ ಮಾಡದೇ, ವಂಚಿಸುತ್ತಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಆರೋಪಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1 ಸಾವಿರ ಕೋಟಿ ರು.ಅನುದಾನವನ್ನು ಎಲ್ಲಾ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಘೋಷಿಸಿದ್ದ 1500 ಕೋಟಿ ರು ಗಳಲ್ಲಿ ಕೇವಲ ₹75.04 ಕೋಟಿ ವೆಚ್ಚ ಮಾಡಿ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಎಲೆ ಮರೆಯ ಕಾಯಿಯಂತಿರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಕುಂಬಾರ, ಕಂಬಾರ, ಗಾಣಿಗ, ಹಡಪದ, ಈಡಿಗ, ಮಾಳಿ, ಸವಿತಾ ಸಮಾಜ, ಉಪ್ಪಾರ ಸೇರಿದಂತೆ ಇನ್ನೂ ಹಲವಾರು ಇನ್ನೂ ಅನೇಕ ಸಮುದಾಯಗಳು ಸಹ ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲಿ ಎಂದು ಬಿಜೆಪಿ ಸರ್ಕಾರವಿದ್ದಾಗ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂತಹ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮಗಳಿಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅವರು ಟೀಕಿಸಿದರು.ರಾಜ್ಯದ ಹಿಂದುಳಿದ ವರ್ಗಗಳ ನಿಗಮಗಳಿಗೆ ತಕ್ಷಣೇ ಅನುದಾನ ಕೊಡಿ, ಇಲ್ಲವೇ ನಿಗಮಗಳನ್ನು ಮುಚ್ಚಿ ಬಿಡಿ ಎಂಬ ಘೋಷಣೆಯೊಂದಿಗೆ ಡಿ.13ರಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಕೆಬಿ ಬಡಾವಣೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು, ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಉಪ ವಿಭಾಗಾಧಿಕಾರಿಗಳ ಮುಖಾಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದು ರಾಜನಹಳ್ಳಿ ಶಿವಕುಮಾರ ತಿಳಿಸಿದರು.
ಈ ವೇಳೆ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ವೈ.ಮಹೇಂದ್ರ, ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ರವಿಕುಮಾರ, ಎನ್.ಮಂಜುನಾಥ ಇತರರು ಇದ್ದರು.