ಸಾರಾಂಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಗೊಬ್ಬರದ ಕೊರತೆ ಒಂದು ಸಾಕ್ಷಿ. ಮಳೆಯಾದಾಗಲೇ ಗೊಬ್ಬರ ದಾಸ್ತಾನು ಇಡಬೇಕಿತ್ತು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಕೊಪ್ಪಳ: ಕಾಂಗ್ರೆಸ್ ಸರ್ಕಾರ ರೈತರಿಗೆ ಅಗತ್ಯವಾದ ಗೊಬ್ಬರ ನೀಡದೆ ಮಣ್ಣು ತಿನ್ನಿಸುತ್ತಿದೆ. ಗೊಬ್ಬರ ಸಿಗದೆ ಹೋದರೆ ರೈತರು ಮಣ್ಣು ತಿಂತಾರೆ, ಇಲ್ಲವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ತಾರೆ. ರೈತರಿಗೆ ಗೊಬ್ಬರ ನೀಡದೆ ಸಿಎಂ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಆಡಳಿತ ಮಾಡುತ್ತಾರೋ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಗೊಬ್ಬರದ ಕೊರತೆ ಒಂದು ಸಾಕ್ಷಿ. ಮಳೆಯಾದಾಗಲೇ ಗೊಬ್ಬರ ದಾಸ್ತಾನು ಇಡಬೇಕಿತ್ತು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗೊಬ್ಬರದ ಗಲಾಟೆಯಾಗಿತ್ತು. ಗೋಲಿಬಾರ್ ಸಹ ಆಗಿತ್ತು. ಆಗ ನಾನು ಸಹಕಾರಿ ಮಹಾಮಂಡಳದ ಅಧ್ಯಕ್ಷನಿದ್ದೆ. ಆಗ ಯಡಿಯೂರಪ್ಪ ಕ್ಯಾಬಿನೆಟ್ ಮಿಟಿಂಗ್ ಕರೆದು ಮುಂದೆ ಯಾವತ್ತೂ ಗೊಬ್ಬರದ ಕೊರತೆ ಆಗದಂತೆ ಸೂಚನೆ ನೀಡಿದ್ದರು. ನಾನು ಏಳೂವರೆ ವರ್ಷ ಮಹಾಮಂಡಳದ ಅಧ್ಯಕ್ಷನಿದ್ದೆ. ಒಂದು ಕೆಜಿ ಸಹಿತ ಗೊಬ್ಬರದ ಕೊರತೆ ಆಗದಂತೆ ನೋಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಗೊಬ್ಬರ ನೀಡಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈ ಸರ್ಕಾರ ಗಮನವೂ ಇಲ್ಲ, ಆಸಕ್ತಿಯೂ ಇಲ್ಲ. ಯಾವ ಸೊಸೈಟಿ ಮುಂದೆ ಹೋದರೂ ಗೊಬ್ಬರ ಸಿಗುತ್ತಿಲ್ಲ. ಒಂದು ಸೊಸೈಟಿಯಲ್ಲಿ ಕೇವಲ 20 ಟನ್ ಗೊಬ್ಬರ ಕೊಡುತ್ತಿದ್ದಾರೆ. 20 ಟನ್ ಗೊಬ್ಬರ ಬಂದರೆ ತಲೆಗೆ ಒಂದು ಚೀಲ ಸಹ ಬರುವುದಿಲ್ಲ. ಖಾಸಗಿ ಆಗ್ರೋ ಅಂಗಡಿಗಳಲ್ಲಿ ₹500ರಿಂದ ₹600ಕ್ಕೆ ಯೂರಿಯಾ ಗೊಬ್ಬರ ಮಾರುತ್ತಿದ್ದಾರೆ. ಇದು ನಿರ್ಲಕ್ಷ್ಯದ ಸರ್ಕಾರ ಎಂದು ಆರೋಪಿಸಿದ್ದಾರೆ.ಯೂರಿಯಾ ಗೊಬ್ಬರ ಸಿಗದೆ ರೈತ ಮಣ್ಣು ತಿಂದಿದ್ದಾನೆ. ರೈತ ಮತ್ತೇನು ಮಾಡಬೇಕು? ಗೊಬ್ಬರ ಸಿಗದೆ ಹೋದ್ರೆ ಮಣ್ಣು ತಿಂತಾರೆ, ಇಲ್ಲವೇ ನೇಣು ಸಹ ಬಿಗಿದು ಆತ್ಮಹತ್ಯೆ ಮಾಡಿಕೊಳ್ತಾರೆ. ಅಂತಹ ಸ್ಥಿತಿ ರಾಜ್ಯದಲ್ಲಿ ಬಂದಿದೆ. ಇದು ರೈತ ವಿರೋಧಿ ಸರ್ಕಾರ. ಸಿದ್ದರಾಮಯ್ಯ ಯಾವ ಮುಖ ಇಟ್ಕೊಂಡು ಆಡಳಿತ ಮಾಡ್ತೀದಾರೆ ಏನೋ, ಯಾವ ನೈತಿಕತೆ ಇಟ್ಕೊಂಡು ಆಡಳಿತ ಮಾಡ್ತೀದಾರೆ ಎಂದು ಪ್ರಶ್ನಿಸಿದ್ದಾರೆ.
ಗೊಬ್ಬರ ಬಹುತೇಕ ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟವಾಗುತ್ತಿದೆ ಎಂದು ದೂರಿದ್ದಾರೆ. ಇದು ಎಲ್ಲವನ್ನೂ ಬಿಟ್ಟ ಸರ್ಕಾರ. ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಭಾಷಣ ಬಿಟ್ರೆ ಮತ್ತೇನೂ ಸರ್ಕಾರದಲ್ಲಿ ಇಲ್ಲ ಎಂದು ಆರೋಪಿಸಿದ್ದಾರೆ.