ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ

| Published : Dec 30 2024, 01:02 AM IST / Updated: Dec 30 2024, 01:03 AM IST

ಸಾರಾಂಶ

ಎಲ್.ಡಿ.ಎಫ್ ಸರಕಾರವು ಕೇರಳ ರಾಜ್ಯದಲ್ಲಿನ ಕಡು ಕಡುಬಡತನವನ್ನು ಸಂಪೂರ್ಣ ನಿವಾರಿಸುವ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಇಡೀ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಮಾದರಿಯಾಗಿದ್ದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ ಎಂದು ಸಿ.ಪಿ.ಐ.(ಎಂ), ಪಾಲಿಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಎಲ್.ಡಿ.ಎಫ್ ಸರಕಾರವು ಕೇರಳ ರಾಜ್ಯದಲ್ಲಿನ ಕಡು ಕಡುಬಡತನವನ್ನು ಸಂಪೂರ್ಣ ನಿವಾರಿಸುವ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಇಡೀ ಭಾರತೀಯ ಒಕ್ಕೂಟ ವ್ಯವಸ್ಥೆಗೆ ಮಾದರಿಯಾಗಿದ್ದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ ಎಂದು ಸಿ.ಪಿ.ಐ.(ಎಂ), ಪಾಲಿಟ್ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ತಿಳಿಸಿದರು.

ಅವರು ಸಮಗ್ರ, ಸಮೃದ್ಧ-ಕರ್ನಾಟಕ ಕ್ಕಾಗಿ ತುಮಕೂರಿನಲ್ಲಿ ನಡೆಯುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷ ದ ಕರ್ನಾಟಕ ರಾಜ್ಯ 24 ನೇ ಸಮ್ಮೇಳನದ ಕಾಂ. ಸೀತಾರಾಮ ಯೆಚೂರಿ ವೇದಿಕೆ’ಯಲ್ಲಿ ಬಹಿರಂಗ ಸಭೆಯಲ್ಲ ಮಾತನಾಡಿದರು.

ಭಾರತದಲ್ಲಿ ರಾಜ್ಯ ಸರಕಾರಗಳಿಗೆ ಸಂಪನ್ಮೂಲಗಳ ಇತಿ ಮಿತಿ ಇದೆ. ಆದರೂ ಜನಪರ ಗುರಿಯೊಂದಿಗೆ ಕೇರಳದ ಎಲ್.ಡಿ.ಎಫ್. ಸರಕಾರವು ಕೆಲಸ ಮಾಡುತ್ತಿದೆ. ಈ ಸರಕಾರದ ಪ್ರಯತ್ನಗಳಿಗೆ ಕರ್ನಾಟಕದ ಜನರ ಸೌಹಾರ್ದ ಬೆಂಬಲ ಬೇಕಿದೆ ಎಂದರು.

ಸಿ.ಪಿ.ಐ.(ಎಂ) ಪ್ರಜಾಪ್ರಭುತ್ವ ತತ್ವವನ್ನು ಪಾಲಿಸುತ್ತದೆ. ಪ್ರತಿಮೂರು ವರ್ಷಕ್ಕೊಮ್ಮೆ ಶಾಖೆಯಿಂದ ರಾಷ್ಟ್ರಮಟ್ಟದವರೆಗೆ, ಸ್ವಯಂ ಟೀಕೆಯೊಂದಿಗೆ ಪ್ರಜಾಸತ್ತಾತ್ಮಕವಾಗಿ ತನ್ನ ನೀತಿಗಳನ್ನು ಚರ್ಚೆ ಮಾಡುತ್ತದೆ. ಹೇಗೆ ರೈತ-ಕಾರ್ಮಿಕರ, ಕೃಷಿಕೂಲಿಕಾರರ, ವಿದ್ಯಾರ್ಥಿ ಯುವಜನ ಚಳುವಳಿಯನ್ನು ಬಲಗೊಳಿಸಬಹುದು ಎಂದು ಚರ್ಚಿಸುತ್ತದೆ. ಸಿಪಿಐ(ಎಂ) ಪಕ್ಷ ಇತರ ಪಕ್ಷಗಳಂತಲ್ಲ. ಪ್ರತಿ ಹಂತದಲ್ಲೂ ನಾಯಕತ್ವವನ್ನು ಪ್ರಜಾಪತ್ತಾತ್ಮಕವಾಗಿ ಚುನಾಯಿಸಲಾಗುತ್ತದೆ ಎಂದರು.

ಸಿ.ಪಿ.ಐ.(ಎಂ) ಪಾಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್ ಮಾತನಾಡಿ ಭಾರತದಲ್ಲಿ ಗಣತಂತ್ರದ ‘ಅಮೃತ ಕಾಲ್’ ಅನ್ನು, ಸಂವಿಧಾನ ಅಂಗೀಕಾರದ 75 ನೇ ವರ್ಷದ ಆಚರಣೆ ನಡೆಸಲಾಗುತ್ತಿದೆ. ಭಾರತವು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆ ಆಗುತ್ತದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ವಾಸ್ತವ ಭಿನ್ನವಾಗಿದೆ. ಇದು ಹಸಿವಿನ ಗಣರಾಜ್ಯ, ಅತಿದೊಡ್ಡ ಸಂಖ್ಯೆ ಬಡವರು, ಅತಿಹೆಚ್ಚು ಜನ ಭೂಹೀನರು, ಅತಿಹೆಚ್ಚು ಹಸಿದವರು ಭಾರತದಲ್ಲಿ ಇದ್ದಾರೆ. ಭಾರತದಲ್ಲಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳಾಗುತ್ತಿವೆ. ಸರಕಾರ ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.

ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯೆ ಕೆ. ನೀಲಾ ಪ್ರಗತಿಪರ ಚಿಂತಕ ದೊರೈ ರಾಜ್, ಸಿ.ಪಿ.ಐ.(ಎಂ) ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯ ಸೈಯದ್ ಮುಜೀಬ್ ಅವರು ಮಾತನಾಡಿದರು

ಇದೇ ಸಂದರ್ಭದಲ್ಲಿ ತುಮಕೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಅವರನ್ನು ಎ. ವಿಜಯ ರಾಘವನ್ ಅವರು ಸನ್ಮಾನಿಸಿದರು. ವೇದಿಕೆಯಲ್ಲಿ ಮೀನಾಕ್ಷಿ ಸುಂದರಂ . ಬಿ.ವಿ. ರಾಘವಲು, ಕೆ.ಎನ್. ಉಮೇಶ್, ಚಿಂತಕ ಸಿ.ಯತಿರಾಜು, ಪ್ರೊ. ದೊರೈರಾಜ್, ಲೇಖಕಿ ಬಾ.ಹ. ರಮಾಕುಮಾರಿ ಪಾಲ್ಗೊಂಡಿದ್ದರು.