ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಸಹಕಾರಿ ಕ್ಷೇತ್ರದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ಗುರುತಿಸಿ ನನಗೆ ಸಹಕಾರಿ ರತ್ನ ಪ್ರಶಸ್ತಿ ನೀಡಿರುವುದಕ್ಕೆ ಅಭಾರಿಯಾಗಿರುತ್ತೇನೆ ಮತ್ತು ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಎಂದು ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ ಹೇಳಿದರು.ಪಟ್ಟಣದ ಜ್ಯೋತಿನಗರದ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆ ಹಾಗೂ ಸಹೋದರ, ಶಾಸಕ ಎಚ್.ಸಿ.ಬಾಲಕೃಷ್ಣ ರವರು ಸಹಕಾರಿ ಕ್ಷೇತ್ರದಲ್ಲಿ ನನಗೆ ಇರುವ ಆಸಕ್ತಿಯನ್ನು ನೋಡಿ ಮೊದಲ ಬಾರಿಗೆ ಚಕ್ರಬಾವಿ ವಿಎಸ್ಎಸ್ಎನ್ ನಿರ್ದೇಶಕರಾಗಿ ನಂತರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಈಗ ಬಮುಲ್ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಸಹಕಾರಿ ಕ್ಷೇತ್ರದಲ್ಲಿ ರೈತ ಬಾಂಧವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಸಹಕಾರಿ ಕ್ಷೇತ್ರವು ಹೆಚ್ಚಿನದಾಗಿ ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿದ್ದು, ಈ ಭಾಗದಲ್ಲೂ ಕೂಡ ನಬಾರ್ಡ್, ಅಪೆಕ್ಸ್, ಜಿಲ್ಲಾ ಬ್ಯಾಂಕ್ ಮೂಲಕ ವಿಎಸ್ಎಸ್ಎನ್ ಹಾಗೂ ಡೈರಿಗಳ ಮೂಲಕ ರೈತರಿಗೆ ಸಹಕಾರ ಕೊಡುವ ಕೆಲಸ ಮಾಡಲಾಗುತ್ತಿದ್ದು, ಬೆಳೆ ಸಾಲದ ಮೂಲಕ ₹ 200 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಹಂದಿ, ಕುರಿ ಸಾಕಣೆ ಹಾಗೂ ಅಣಬೆ ಬೇಸಾಯ ಮಾಡಲು ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಈ ಮೂಲಕ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ತಾಲೂಕಿನ ವಿಎಸ್ಎಸ್ಎನ್ ಕಟ್ಟಡಗಳಿಗೆ ನೆರವು, ಬಮೂಲ್ ವತಿಯಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳು, ವಿಮಾ ಸೌಲಭ್ಯ. ನಾಟಿ ಹಸುಗಳನ್ನು ಶೇ. 50ರಷ್ಟು ರಿಯಾಯಿತಿಯಲ್ಲಿ ಬಮೂಲ್ ವತಿಯಿಂದ ಈ ಬಾರಿ ಚಕ್ರಬಾವಿ ರೈತರಿಗೆ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಶಸ್ತಿ ನನಗೆ ಜವಾಬ್ದಾರಿ ಹೆಚ್ಚಿಸಿದ್ದು, ಈ ಮೂಲಕ ರೈತರ ಋಣ ತೀರಿಸುವ ಕೆಲಸವನ್ನು ಮಾಡುತ್ತೇನೆ. ಮಾಜಿ ಶಾಸಕ ಎ.ಮಂಜುನಾಥ್ ರವರು ಸ್ವಯಂ ಸಹಕಾರಿ ರತ್ನ ಎಂದು ಹೇಳಿಕೊಳ್ಳುತ್ತಿದ್ದರು, ಈಗ ನನ್ನನ್ನು ಸರ್ಕಾರದ ವತಿಯಿಂದಲೇ ಸಹಕಾರಿ ರತ್ನ ಎಂದು ಗುರುತಿಸಿರುವುದು ನಾನು ಈ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗೆ ನೀಡಿದ ಗೌರವ ಎಂದು ತಿಳಿದುಕೊಳ್ಳುತ್ತೇನೆ. ರಾಜಕೀಯವಾಗಿ ಟೀಕೆ ಮಾಡುವವರಿಗೆ ಅಭಿವೃದ್ಧಿ ಮೂಲಕವೇ ಉತ್ತರ ಕೊಡೋಣ ಎಂದು ಅಶೋಕ್ ತಿಳಿಸಿದರು.ಮಾಗಡಿ ತಾಲೂಕಿಗೆ ಯಾವುದಾದರೂ ಘಟಕ ಕೊಡಲಿ:
ಬಮೂಲ್ ಅಧ್ಯಕ್ಷರಾಗಿ ಡಿ.ಕೆ.ಸುರೇಶ್ ಅಧಿಕಾರ ವಹಿಸಿಕೊಂಡಿದ್ದು, ಕನಕಪುರದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಿ ಹಾಲಿನ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಚನ್ನಪಟ್ಟಣ ಮತ್ತು ಕಣ್ವದಲ್ಲಿ ಉತ್ಪಾದಕ ಘಟಕಗಳು ಬರುತ್ತಿರುವುದರಿಂದ ಮಾಗಡಿಯಲ್ಲೂ ಕೂಡ ಪಶು ವ್ಯವಹಾರ ಘಟಕ ಅಥವಾ ಬೇರೆ ಯಾವುದಾದರೂ ಘಟಕ ಕೊಡುವಂತೆ ಶಾಸಕ ಬಾಲಕೃಷ್ಣ ಹಾಗೂ ನಾವು ಮನವಿ ಮಾಡಿದ್ದು, 15 ಎಕರೆ ಜಾಗ ಕೊಡಲು ಸಿದ್ದರಿದ್ದೇವೆ, ಈ ಮೂಲಕ ನಮ್ಮ ತಾಲೂಕಿಗೆ ಬಮೂಲ್ ವತಿಯಿಂದ ಯಾವುದಾದರೂ ಉತ್ಪಾದಕ ಘಟಕ ಆರಂಭ ಮಾಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಕಾಂಗ್ರೆಸ್ ಮುಖಂಡರಾದ ರೂಪೇಶ್, ಶಿವಕುಮಾರ್, ಕೇಬಲ್ ಮಂಜು, ಡೂಮ್ ಲೈಟ್ ಮೂರ್ತಿ, ಅಶ್ವಥ್, ಬೋರ್ ವೆಲ್ ನರಸಿಂಹಯ್ಯ, ಪೊಲೀಸ್ ವಿಜಿ, ಶಾಂತಕುಮಾರ್, ಚಕ್ರಬಾವಿ ಶ್ರೀಧರ್, ಕಸ್ತೂರಿ ಕಿರಣ್, ಶ್ರೀನಿವಾಸ್ ಸೇರಿದಂತೆ ಇತರರು ಅಭಿನಂದಿಸಿದರು.
;Resize=(128,128))
;Resize=(128,128))
;Resize=(128,128))