ಪ್ರಜ್ವಲ್‌ ರೇವಣ್ಣ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ

| Published : May 02 2024, 12:24 AM IST

ಪ್ರಜ್ವಲ್‌ ರೇವಣ್ಣ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಐಟಿಯಿಂದ ಸಮನ್ಸ್‌ ಜಾರಿ । ತನಿಖೆಗೆ ಹಾಜರಾಗುವಂತೆ ಸೂಚನೆ: ಪರಮೇಶ್ವರ

ಕನ್ನಡಪ್ರಭಾ ವಾರ್ತೆ ಸಿರಿಗೆರೆ

ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ತೆಗೆದುಕೊಂಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ತಿಳಿಸಿದರು.

ದಾವಣಗೆರೆಗೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಹೋಬಳಿ ಕೇಂದ್ರ ಭರಮಸಾಗರದಲ್ಲಿ ಮಾತನಾಡಿದ ಸಚಿವರು, ಪ್ರಕರಣದ ತನಿಖೆ ನಡೆಸಲು ಈಗಾಗಲೇ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖಾ ಅಧಿಕಾರಿಗಳನ್ನು ನೇಮಿಸಿದೆ. ಎಸ್ಐಟಿಯಿಂದ ಆರೋಪಿಗಳಿಗೆ ಈಗಾಗಲೇ ಸಮನ್ಸ್‌ ಜಾರಿಗೊಳಿಸಿ, ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಅವರು ಕಾನೂನು ರೀತ್ಯಾ ಎಸ್ಐಟಿ ಮುಂದೆ ಹಾಜರಾಗಬೇಕು ಎಂದರು. ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ತೆರಳಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಆರೋಪಿ ಎಲ್ಲೇ ಇರಲಿ, ತನಿಖಾ ಸಂಸ್ಥೆಯು ಸಮನ್‌ ಜಾರಿಗೊಳಿಸಿರುವುದರಿಂದ ಕೂಡಲೇ ಅವರು ತನಿಖೆಗೆ ಹಾಜರಾಗಬೇಕು. ಒಂದು ವೇಳೆ ತನಿಖೆಗೆ ಹಾಜರಾಗದೇ ಇದ್ದಲ್ಲಿ ಕಾನೂನು ಪ್ರಕಾರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಕಾಂಗ್ರೆಸ್‌ಗೆ ಜಯ:

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.‌ ಚಂದ್ರಪ್ಪ ಜಯ ಸಾಧಿಸುವ ವಿಶ್ವಾಸವಿದೆ. ಮತದಾರರ ಒಲವು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿದೆ. ಅದರಂತೆಯೇ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರೂ ಸಹ ಜಯ ಗಳಿಸಲಿದ್ದಾರೆ. ದಾವಣಗೆರೆ ಕ್ಷೇತ್ರದ ಎಲ್ಲೆಡೆ ನಮ್ಮ ಪಕ್ಷದ ಅಭ್ಯರ್ಥಿಗೆ ಮತದಾರರು ಒಲವು ತೋರಿಸುತ್ತಿದ್ದಾರೆ. ಅವರು ಕ್ಷೇತ್ರದ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದರು. ಕಾಂಗ್ರೆಸ್‌ ಮುಖಂಡ ಎಚ್.‌ಎನ್.‌ ತಿಪ್ಪೇಸ್ವಾಮಿ ಜೊತೆಗಿದ್ದರು.